ADVERTISEMENT

ಮಲೇಷ್ಯಾ: ಕಾಲುಚೀಲಗಳ ಮೇಲೆ ‘ಅಲ್ಲಾಹ್’ ಪದ– ಆಕ್ರೋಶ

ಏಜೆನ್ಸೀಸ್
Published 26 ಮಾರ್ಚ್ 2024, 14:14 IST
Last Updated 26 ಮಾರ್ಚ್ 2024, 14:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕ್ವಾಲಾಲಂಪುರ: ಮಲೇಷ್ಯಾದ ಕೆಕೆ ಮಾರ್ಟ್‌ ಗ್ರೂಪ್‌ನ ವ್ಯಾಪಾರ ಮಳಿಗೆಯಲ್ಲಿ ‘ಅಲ್ಲಾಹ್’ ಎಂದು ಮುದ್ರಿತವಾದ ಕಾಲುಚೀಲಗಳ (ಸಾಕ್ಸ್‌) ಮಾರಾಟ ಕಂಡುಬಂದ ಕಾರಣ, ಮಳಿಗೆಯ ಮಾಲೀಕರು ಮತ್ತು ಅದರ ಪೂರೈಕೆದಾರರ ಮೇಲೆ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ.

ದೇಶದ ಎರಡನೇ ದೊಡ್ಡ ಅಗತ್ಯ ವಸ್ತುಗಳ ವ್ಯಾಪಾರ ಮಳಿಗೆ ಸರಪಳಿಯಾದ ಕೆಕೆ ಮಾರ್ಟ್‌ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಚಾಯ್‌ ಕೀ ಕಾನ್‌ ಮತ್ತು ಕಂಪನಿಯ ನಿರ್ದೇಶಕರಾದ ಅವರ ಪತ್ನಿ ಲೋಹ್‌ ಸಿವ್‌ ಮಯಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಗಾಸಿಗೊಳಿಸಿಲ್ಲ ಎಂದಿರುವ ಅವರು, ಈ ಉತ್ಪನ್ನಗಳ ಪೂರೈಕೆದಾರರನ್ನು ದೂಷಿಸಿದ್ದಾರೆ. 

3.4 ಕೋಟಿ ಜನಸಂಖ್ಯೆ ಹೊಂದಿರುವ ಮಲೇಷ್ಯಾದಲ್ಲಿ ಮುಸ್ಲಿಂ ಸಮುದಾಯದವರು ಮೂರನೇ ಎರಡರಷ್ಟು ಇದ್ದು, ಧರ್ಮವು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ‘ಅಲ್ಲಾಹ್’ ಎಂಬುದು ಅರೇಬಿಕ್‌ ಪದವಾಗಿದ್ದು, ದೇವರು ಎಂದು ಅರ್ಥೈಸುತ್ತದೆ. ಈ ಪದವನ್ನು ಕಾಲುಚೀಲದಲ್ಲಿ ಮುದ್ರಿಸಿರುವುದಕ್ಕೆ ಮಲೇಷ್ಯಾದ ಅನೇಕ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT

‘ಚೀನಾದಿಂದ ಈ ಕಾಲುಚೀಲಗಳ ಆಮದಾಗಿವೆ. ಅವುಗಳನ್ನು ತಪಾಸಣೆ ಮಾಡುವಲ್ಲಿ ಲೋಪ ಆಗಿದ್ದಕ್ಕೆ ಕ್ಷಮೆಯಾಚಿಸುತ್ತೇವೆ’ ಎಂದು ಕಾಲುಚೀಲಗಳ ಪೂರೈಕೆದಾರ ಕ್ಸಿನ್‌ ಜಿಯಾನ್‌ ಚಾಂಗ್‌ ಹೇಳಿದ್ದಾರೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳು ಒಂದು ವರ್ಷ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ. ಕೆಕೆ ಮಾರ್ಟ್‌ ದೇಶೀಯವಾಗಿ 810 ಮಳಿಗೆಗಳನ್ನು ಹೊಂದಿದ್ದು, 5,000 ಉದ್ಯೋಗಿಗಳಿದ್ದಾರೆ. ನೇಪಾಳ ಮತ್ತು ಭಾರತದಲ್ಲೂ ಈ ಕಂಪನಿ ಮಳಿಗೆಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.