ADVERTISEMENT

ಭಾರತೀಯ ಸೈನಿಕರು ಮೇ 10ರೊಳಗೆ ಮಾಲ್ದೀವ್ಸ್ ತೊರೆಯಲಿದ್ದಾರೆ: ಅಧ್ಯಕ್ಷ ಮುಯಿಝು

ಪಿಟಿಐ
Published 3 ಏಪ್ರಿಲ್ 2024, 14:34 IST
Last Updated 3 ಏಪ್ರಿಲ್ 2024, 14:34 IST
<div class="paragraphs"><p>ಮೊಹಮ್ಮದ್ ಮುಯಿಝು</p></div>

ಮೊಹಮ್ಮದ್ ಮುಯಿಝು

   

ರಾಯಿಟರ್ಸ್‌ ಚಿತ್ರ

ಮಾಲೆ: ‘ಮಾಲ್ದೀವ್ಸ್‌ನಲ್ಲಿರುವ ಭಾರತೀಯ ಸೈನಿಕರು ಸ್ವದೇಶಕ್ಕೆ ಮರಳುವ ಪ್ರಕ್ರಿಯೆ ಮೇ 10ರೊಳಗೆ ಪೂರ್ಣಗೊಳ್ಳಲಿದೆ. 2ನೇ ವಾಯುನೆಲೆಯಿಂದ ಭಾರತೀಯ ಸೈನಿಕರು ಏಪ್ರಿಲ್ ಅಂತ್ಯದೊಳಗೆ ನಿರ್ಗಮಿಸಲಿದ್ದಾರೆ’ ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ.

ADVERTISEMENT

ಮಾಲ್ದೀವ್ಸ್‌ಗೆ ಭಾರತವು ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್‌ಗಳ ನಿರ್ವಹಣೆಗಾಗಿ ಇದ್ದ 25 ಭಾರತೀಯ ಸೇನೆಯ ಸಿಬ್ಬಂದಿ ಮೊದಲ ಹಂತದಲ್ಲಿ ದ್ವೀಪರಾಷ್ಟ್ರವನ್ನು ತೊರೆದಿದ್ದಾರೆ. ಮಾರ್ಚ್ 10ರ ಗಡುವನ್ನು ಇವರಿಗೆ ನೀಡಲಾಗಿತ್ತು. ಭಾರತೀಯ ನಾಗರಿಕ ಸಿಬ್ಬಂದಿಗೆ ಹೆಲಿಕಾಪ್ಟರ್‌ ನಿರ್ವಹಣೆಯ ಮಾಹಿತಿ ನೀಡಿದ ಬಳಿಕ ಈ ಸಿಬ್ಬಂದಿ ಭಾರತಕ್ಕೆ ತೆರಳಿದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ಮುಯಿಝು ತಿಳಿಸಿದ್ದಾರೆ.

ದ್ವೀಪ ಸಮೂಹದ ರಾಷ್ಟ್ರದಲ್ಲಿ ತುರ್ತು ವೈದ್ಯಕೀಯ ಸೌಲಭ್ಯ ಹಾಗೂ ನೆರವಾಗುವ ದೃಷ್ಟಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಡಾರ್ನಿಯರ್ ವಿಮಾನವನ್ನು ಮಾಲ್ದೀವ್ಸ್‌ಗೆ ಭಾರತ ನೀಡಿತ್ತು. ಇದರ ನಿರ್ವಹಣೆಗೆ ಭಾರತೀಯ ಸೇನೆಯ 88 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಉಭಯ ರಾಷ್ಟ್ರಗಳ ನಡುವೆ ಫೆ. 2ರಂದು ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಮೇ 10ರೊಳಗೆ ಈ ಮೂರು ವೈಮಾನಿಕ ಸಾಧನಗಳ ನಿರ್ವಹಣೆಗೆ ನಿಯೋಜಿಸಲಾಗಿದ್ದ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಒಪ್ಪಂದ ನಡೆದಿತ್ತು. ಇದರ ಭಾಗವಾಗಿ ಮೊದಲ ತಂಡ ಮಾರ್ಚ್ 10ರೊಳಗೆ ದ್ವೀಪ ರಾಷ್ಟ್ರವನ್ನು ತೊರೆದಿದೆ.

‘ಸ್ವತಂತ್ರ ಮಾಲ್ದೀವ್ಸ್‌ ಕಲ್ಪನೆಗೆ ಬದ್ಧವಾಗಿದ್ದು, ಅದನ್ನು ಸಾಕಾರಗೊಳಿಸಲು ಮತ್ತು ಜನರಿಗೆ ನೀಡಿದ್ದ ವಾಗ್ದಾನ ಈಡೇರಿಸಲು ಬದ್ಧ’ ಎಂದು ಸರ್ಕಾರಿ ಸ್ವಾಮ್ಯ ಮಾಧ್ಯಮ ಸಂಸ್ಥೆಗೆ ಮುಯಿಝು ಹೇಳಿದ್ದಾರೆ.

‘2ನೇ ವಾಯುನೆಲೆಯಲ್ಲಿದ್ದ ಸಿಬ್ಬಂದಿ ಏಪ್ರಿಲ್ ಅಂತ್ಯದೊಳಗೆ ನಿರ್ಗಮಿಸಲಿದ್ದಾರೆ. ಮೂರನೇ ನೆಲೆಯಲ್ಲಿರುವ ಸೇನಾ ಸಿಬ್ಬಂದಿ ಮೇ 10ರೊಳಗೆ ದೇಶವನ್ನು ತೊರೆಯಲಿದ್ದಾರೆ. ಸೇನಾ ಸಮವಸ್ತ್ರವಲ್ಲದೇ ಸಾಮಾನ್ಯ ಉಡುಪಿನಲ್ಲಿರುವ ಭಾರತೀಯ ಸೇನೆಗೆ ಸೇರಿದ ಒಬ್ಬರೂ ಮೇ 10ರ ನಂತರ ಮಾಲ್ದೀವ್ಸ್‌ ಒಳಗಿರುವಂತಿಲ್ಲ’ ಎಂದಿದ್ದಾರೆ.

ಭಾರತ ವಿರೋಧ ನಿಲುವು ಹೊಂದಿರುವ ಮುಯಿಝು ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ಮಾಲ್ದೀವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಗೆ ದೇಶ ತೊರೆಯುವಂತೆ ಸೂಚನೆ ನೀಡಿದ್ದರು. ಇದಾದ ನಂತರ ಚೀನಾ ಪ್ರವಾಸ ಕೈಗೊಂಡ ಅವರು ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಒತ್ತು ನೀಡಿದ್ದರು. ಮಾಲ್ದೀವ್ಸ್‌ನ ಸೇನಾ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಚೀನಾ ಲಿಬರೇಷನ್ ಆರ್ಮಿಯೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಂಡಿದ್ದಾರೆ.

ಚೀನಾ ಹಾರ್ಬರ್ ಎಂಜಿನಿಯರಿಂಗ್ ಕಂಪನಿಯು ಮಾಲ್ದೀವ್ಸ್‌ನ ಕೈಗಾರಿಕಾ ಅಭಿವೃದ್ಧಿ ವಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇಲ್ಲಿ ಕೃಷಿ ಆರ್ಥಿಕ ವಲಯ ಸೃಷ್ಟಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಯೋಜನೆ ಹೊಂದಿವೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.