ADVERTISEMENT

ಭಯಾನಕ ಸುಂಟರಗಾಳಿಗೆ ಮಧ್ಯ ಅಮೆರಿಕ ತತ್ತರ: ಕನಿಷ್ಠ 32 ಸಾವು

ಏಜೆನ್ಸೀಸ್
Published 16 ಮಾರ್ಚ್ 2025, 3:04 IST
Last Updated 16 ಮಾರ್ಚ್ 2025, 3:04 IST
<div class="paragraphs"><p>ಮಿಸೌರಿಯಲ್ಲಿ ಗಾಳಿಯ ಹೊಡೆತಕ್ಕೆ ನಾಶವಾಗಿರುವ ಮನೆಗಳ ದೃಶ್ಯ</p></div>

ಮಿಸೌರಿಯಲ್ಲಿ ಗಾಳಿಯ ಹೊಡೆತಕ್ಕೆ ನಾಶವಾಗಿರುವ ಮನೆಗಳ ದೃಶ್ಯ

   

– ರಾಯಿಟರ್ಸ್ ಚಿತ್ರ

ಹೂಸ್ಟನ್‌: ಮಧ್ಯ ಅಮೆರಿಕದಲ್ಲಿ ಭಾರಿ ಸುಂಟರಗಾಳಿಗೆ ಕನಿಷ್ಠ 32 ಮಂದಿ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗಾಳಿಯ ರಭಸಕ್ಕೆ ಮನೆಗಳ ಹೆಂಚುಗಳು ಹಾರಿಹೋಗಿದ್ದು, ಬೃಹತ್ ಟ್ರಕ್‌ಗಳು ಪಲ್ಟಿಯಾಗುವ ದೃಶ್ಯಗಳನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿವೆ. ಭಾರಿ ಸುಂಟರಗಾಳಿ ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು.

ಭಾರಿ ಗಾಳಿಯಿಂದ ಎದ್ದ ದೂಳಿನಿಂದ ಕಡಿಮೆ ಗೋಚರತೆ ಉಂಟಾಗಿ, ಕಾನ್ಸಾಸ್‌ನಲ್ಲಿ ಕನಿಷ್ಠ 50 ವಾಹನಗಳು ಸರಣಿ ಅಪಘಾತ ಸಂಭವಿಸಿ 8 ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಸುಂಟರಗಾಳಿ ಸಂಬಂಧಿಸಿದ ಅವಘಢದಿಂದಾಗಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಮಿಸೌರಿ ರಾಜ್ಯದ ಹೆದ್ದಾರಿ ಗಸ್ತು ಪೊಲೀಸರು ತಿಳಿಸಿದ್ದಾರೆ. ಗಾಳಿಯ ರಭಸಕ್ಕೆ ಬಂದರೊಂದರಲ್ಲಿ ದೋಣಿಗಳು ಒಂಡೆದೆ ರಾಶಿ ಬಿದ್ದಿರುವ ಚಿತ್ರವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ವಿದ್ಯುತ್ ಕಂಬಗಳು, ಮರಗಳು ಧರಾಶಾಹಿಯಾಗಿದ್ದು, ಹಲವು ಕಟ್ಟಡಗಳಿಗೆ ಹಾನಿಯಾಗಿವೆ. ಗಾಳಿಯ ಹೊಡೆತಕ್ಕೆ ಹಲವು ಪ್ರದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ.

‘ಇಂಥ ಭಯಾನಕ ಗಾಳಿ ನಾನು ನೋಡಿದ್ದು ಇದೇ ಮೊದಲು. ಭಾರಿ ರಭಸವಾಗಿ ಗಾಳಿ ಬೀಸುತ್ತಿದೆ. ನಮ್ಮ ಕಿವಿಗಳೇ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿತ್ತು’ ಎಂದು ಮಿಸೌರಿಯಿಂದ ಸ್ಥಳಾಂತರಿಸಲ್ಪಟ್ಟ ಅಲಿಸಿಯಾ ವಿಲ್ಸನ್ ಎಂಬವರು ಭೀಕರತೆಯನ್ನು ತೆರೆದಿಟ್ಟರು.

ಮಿಸೌರಿಯ ವೇಯ್ನ್ ಕೌಂಟಿಯಲ್ಲಿ 6, ಒಝಾರ್ಕ್ ಕೌಂಟಿಯಲ್ಲಿ ಮೂವರು, ಬಟ್ಲರ್‌, ಜೆಫರ್‌ಸನ್ ಹಾಗೂ ಸೈಂಟ್ ಲೂಯಿಸ್ ಕೌಂಟಿಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟೆಕ್ಸಾಸ್‌ನ ದಕ್ಷಿಣ ಭಾಗದಲ್ಲಿ ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಕಾನ್ಸಾಸ್ ರಾಜ್ಯದಲ್ಲಿ ಮೂವರು ಮೃತಪಟ್ಟು 29 ಮಂದಿ ಗಾಯಗೊಂಡಿದ್ದಾರೆ. ಮಧ್ಯ ಅಮೆರಿಕದ ಕನಿಷ್ಟ 2 ಲಕ್ಷ ಮನೆ ಹಾಗೂ ಕಚೇರಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.