US: Melania Trump threatens Hunter Biden with USD 1 billion defamation suit over Epstein claims
ವಾಷಿಂಗ್ಟನ್: ಅಮೆರಿಕದಲ್ಲಿ ಈಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಮಗ ಹಂಟರ್ ಬೈಡನ್ ನಡುವೆ ವೈಯಕ್ತಿಕ ಟೀಕೆಗಳ ವಾಕ್ಸಮರ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಟ್ರಂಪ್‌ಗೆ ತನ್ನನ್ನು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಫ್ಸ್ಟೀನ್ ಪರಿಚಯಿಸಿದ್ದರು ಎಂದು ಹೇಳಿಕೆ ನೀಡಿರುವ ಹಂಟರ್ ಬೈಡನ್ ವಿರುದ್ಧ 1 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮೆಲಾನಿಯಾ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ 'ಚಾನೆಲ್ 5 ವಿತ್ ಆಂಡ್ರ್ಯೂ ಕ್ಯಾಲಗನ್' ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹಂಟರ್ ಪ್ರಥಮ ಮಹಿಳೆಯ ಬಗ್ಗೆ ಮಾಡಿದ ಸುಳ್ಳು, ಮಾನಹಾನಿಕರ, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಮೆಲಾನಿಯಾ ಅವರ ವಕೀಲ ಅಲೆಜಾಂಡ್ರೊ ಬ್ರಿಟೊ ಒತ್ತಾಯಿಸಿದ್ದಾರೆ.
‘ಹಂಟರ್ ಬೈಡನ್ ರಿಟರ್ನ್ಸ್’ಎಂಬ ಶೀರ್ಷಿಕೆಯ ಸಂದರ್ಶನದ ವಿಡಿಯೊದಲ್ಲಿ, ಹಂಟರ್, ‘ಜೆಫ್ರಿ ಎಫ್ಸ್ಟೀನ್ ಅವರು ಮೆಲಾನಿಯಾ ಅವರನ್ನು ಟ್ರಂಪ್‌ಗೆ ಪರಿಚಯಿಸಿದ್ದರು. ಪ್ರಥಮ ಮಹಿಳೆ ಮಲಾನಿಯಾ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದದ್ದು ಹೀಗೆ. ಮೆಲಾನಿಯಾ ಸಂಪರ್ಕಗಳು ತುಂಬಾ ವಿಶಾಲ ಮತ್ತು ಆಳವಾಗಿವೆ’ ಎಂದು ಹೇಳಿದ್ದರು.
ಈ ಸಂಬಂಧ ಆಗಸ್ಟ್ 6 ರಂದು ಹಂಟರ್ ಬೈಡನ್ ಮತ್ತು ಅವರ ವಕೀಲ ಅಬ್ಬೆ ಲೊವೆಲ್ ಅವರಿಗೆ ನೋಟಿಸ್ ಅನ್ನು ಕಳುಹಿಸಿರುವ ಮೆಲಾನಿಯಾ ಪರ ವಕೀಲ, ಸಂದರ್ಶನದ ವಿಡಿಯೊ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಮತ್ತು ಹೇಳಿಕೆಗಳನ್ನು ಹಿಂತೆಗೆದುಕೊಳ್ಳಿ. ಅಥವಾ ಸಂಭಾವ್ಯ 1 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಎದುರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.