ADVERTISEMENT

ಡೊನಾಲ್ಡ್‌ ಟ್ರಂಪ್‌ ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗೆ ಮರು ಅವಕಾಶ?

ಐಎಎನ್ಎಸ್
Published 2 ಜನವರಿ 2023, 9:28 IST
Last Updated 2 ಜನವರಿ 2023, 9:28 IST
   

ಸ್ಯಾನ್‌ ಫ್ರಾನ್ಸಿಸ್ಕೊ: ನಿಯಮ ಉಲ್ಲಂಘನೆ ಕಾರಣದಿಂದ ಫೇಸ್‌ಬುಕ್‌, ಇನ್‌ಸ್ಟಾದಿಂದ ದೂರ ಉಳಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮ ಖಾತೆಗಳಿಗೆ ಮರಳಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಕುರಿತು ತನ್ನ ನಿರ್ಧಾರವನ್ನು ಪ್ರಕಟಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಸಿದ್ಧತೆ ನಡೆಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟ್ವಿಟರ್ ಮುಖ್ಯಸ್ಥ ಇಲೋನ್ ಮಸ್ಕ್, ಕಳೆದ ನವೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್‌ಗೆ ಹೇರಲಾಗಿದ್ದ ಶಾಶ್ವತ ನಿಷೇಧವನ್ನು ಹಿಂತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಮೆಟಾ ಕೂಡ ಈ ಕುರಿತು ಜನವರಿ 7 ರೊಳಗೆ ತನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿತ್ತು.

ಈ ತಿಂಗಳ ಅಂತ್ಯದಲ್ಲಿ ಮೆಟಾ ಸಂಸ್ಥೆ ಟ್ರಂಪ್‌ ಖಾತೆಗಳ ಮರು ಸಕ್ರಿಯಗೊಳಿಸುವಿಕೆ ಕುರಿತು ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ADVERTISEMENT

ಈ ಸಂಬಂಧ ಕಂಪನಿ ವಿಶೇಷ ತಂಡ ರಚಿಸಿದೆ. ಜೊತೆಗೆ ಫೇಸ್‌ಬುಕ್‌ನ ಜಾಗತಿಕ ನೀತಿ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಮೋನಿಕಾ ಬಿಕರ್ಟ್ ಅಧ್ಯಕ್ಷತೆಯಲ್ಲಿ ಕಂಟೆಂಟ್‌ ಪಾಲಿಸಿ ತಂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಟ್ರಂಪ್‌ ಖಾತೆ ಮರು ಸಕ್ರಿಯದ ಸಾಧಕ–ಬಾಧಕಗಳನ್ನು ಅವಲೋಕಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

2021 ರಲ್ಲಿ, ತನ್ನ ಕಂಟೆಂಟ್‌ ನಿಯಮಗಳ ಅಡಿಯಲ್ಲಿ ಫೇಸ್‌ಬುಕ್ (ಈಗ ಮೆಟಾ) ಟ್ರಂಪ್‌ ಅವರ ಖಾತೆಗಳನ್ನು ಎರಡು ವರ್ಷಗಳವರೆಗೆ ನಿಷೇಧಿಸಿತ್ತು. ಜ.7ಕ್ಕೆ ಈ ಅವಧಿ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.