ADVERTISEMENT

ಮೆಕ್ಸಿಕೊದಲ್ಲಿ ಮೂರನೇ ಅಲೆ ಪ್ರಾರಂಭ! ಸೋಂಕಿನ ಪ್ರಮಾಣದಲ್ಲಿ ಏರಿಕೆ

ಏಜೆನ್ಸೀಸ್
Published 10 ಜುಲೈ 2021, 6:12 IST
Last Updated 10 ಜುಲೈ 2021, 6:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೆಕ್ಸಿಕೊ ನಗರ: ಮೆಕ್ಸಿಕೊದಲ್ಲಿ ಕೋವಿಡ್‌–19 ಮೂರನೇ ಅಲೆ ಆರಂಭವಾಗಿದ್ದು, ಕಳೆದ ವಾರಕ್ಕಿಂತ ಸೋಂಕು ಪ್ರಮಾಣ ಶೇಕಡ 29ರಷ್ಟು ಹೆಚ್ಚಾಗಿದೆ.

‘ಈ ಬಾರಿ ಯುವಕರಲ್ಲಿ ಸೋಂಕು ಹೆಚ್ಚಾಗಿ ಕಾಣಿಸುತ್ತಿದೆ. ಈ ಹಿಂದಿನ ಅಲೆಯು ಸೆಪ್ಟೆಂಬರ್‌ನಲ್ಲಿ ಆರಂಭವಾಗಿತ್ತು. ಆಗ ಸೋಂಕು ಎಷ್ಟು ಪ್ರಮಾಣದಲ್ಲಿ ಇತ್ತೋ, ಅಷ್ಟೇ ಪ್ರಮಾಣದಲ್ಲಿ ಈಗ ಸೋಂಕು ಹರಡುತ್ತಿದೆ. ಕಳೆದ ಬಾರಿ ಜನವರಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಜೂನ್‌ ವೇಳೆಗೆ ಕಡಿಮೆಯಾಗಿತ್ತು’ ಎಂದು ಮೆಕ್ಸಿಕೊದ ಆರೋಗ್ಯ ಇಲಾಖೆ ತಿಳಿಸಿದೆ.

ಆದರೆ ಈ ಬಾರಿ ಆಸ್ಪತ್ರೆಗಳಲ್ಲಿ ಶೇಕಡ 22ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಈ ಹಿಂದಿನ ಅಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿದ್ದವು.

ADVERTISEMENT

‘ಲಸಿಕೆ ಅಭಿಯಾನದಿಂದಾಗಿ ಹಿರಿಯ ನಾಗರಿಕರಲ್ಲಿ ಸೋಂಕು ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ. ಮೆಕ್ಸಿಕೊದಲ್ಲಿ ಶುಕ್ರವಾರದ ವೇಳೆಗೆ ಶೇಕಡ 39ರಷ್ಟು ವಯಸ್ಕರಿಗೆ ಲಸಿಕೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದೇಶದಲ್ಲಿ ಡೆಲ್ಟಾ ತಳಿಯಿಂದಾಗಿ ಸೋಂಕು ಪ್ರಸರಣವಾಗಿಲ್ಲ. ಬದಲಾಗಿ ಸಾರ್ವಜನಿಕ ಚಟುವಟಿಕೆಗಳು ಹೆಚ್ಚಾಗಿದ್ದರಿಂದ ಸೋಂಕು ಹೆಚ್ಚು ವ್ಯಾಪಿಸಿದೆ’ ಎಂದು ಸಹಾಯಕ ಆರೋಗ್ಯ ಕಾರ್ಯದರ್ಶಿ ಹ್ಯೂಗೋ ಲೋಪೆಜ್-ಗ್ಯಾಟೆಲ್ ತಿಳಿಸಿದರು.

‘ಮೆಕ್ಸಿಕೊ ನಗರದಲ್ಲಿ ಆಗಸ್ಟ್‌ ವೇಳೆಗೆ ಮೂರನೇ ಅಲೆಯು ತೀವ್ರ ಗತಿಯಲ್ಲಿ ಹೆಚ್ಚಾಗಲಿದೆ’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.