ADVERTISEMENT

ಮೆಕ್ಸಿಕೊದಲ್ಲಿ ಕೋವಿಡ್‌ನಿಂದ ಈವರೆಗೆ ಒಂದು ಲಕ್ಷ ಸಾವು

ಏಜೆನ್ಸೀಸ್
Published 20 ನವೆಂಬರ್ 2020, 4:58 IST
Last Updated 20 ನವೆಂಬರ್ 2020, 4:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಕ್ಸಿಕೊ ನಗರ: ಮೆಕ್ಸಿಕೊದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಇದರೊಂದಿಗೆ ಕೋವಿಡ್‌ನಿಂದ ಮೃತರ ಸಂಖ್ಯೆ 1 ಲಕ್ಷ ದಾಟಿದ ರಾಷ್ಟ್ರಗಳ ಪೈಕಿ ಮೆಕ್ಸಿಕೊ ನಾಲ್ಕನೇ ಸ್ಥಾನದಲ್ಲಿದೆ.

ಕೆಲವು ದಿನಗಳಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಉಪ ಸಚಿವ ಹ್ಯೂಗೊ ಲೋಪೆಜ್‌ ಗ್ಯಾಟೆಲ್‌ ತಿಳಿಸಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 4,472 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 576 ಮಂದಿ ಕೊನೆಯುಸಿರೆಳೆದಿದ್ದಾರೆ. ಈವರೆಗೆ 10,19,543 ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ 100,104 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

‘ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜ. ಆದರೆ, ಕಡಿಮೆ ಸಾವು ಸಂಭವಿಸುತ್ತಿದೆ. ಇದೇ ನಮ್ಮ ಗುರಿ’ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕಳೆದ ವಾರ ಹೇಳಿಕೆ ನೀಡಿದ್ದರು.

‘ಕಳಪೆ ಆಹಾರ, ಸ್ಥೂಲಕಾಯ ಸಮಸ್ಯೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸೇರಿದಂತೆ ಆರೋಗ್ಯ ಸಮಸ್ಯೆಗಳು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಸರ್ಕಾರ ಹೇಳಿದೆ.

ಅಮೆರಿಕ, ಬ್ರೆಜಿಲ್‌ ಮತ್ತು ಭಾರತದಲ್ಲಿ ಮಾತ್ರ 1 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.