ADVERTISEMENT

ಲಂಕಾ ಅಧ್ಯಕ್ಷರ ಮನೆಯಲ್ಲಿ ಸಿಕ್ಕ ಹಣ ಕೋರ್ಟ್‌ಗೆ ಸಲ್ಲಿಕೆ: ವಿಳಂಬ ತನಿಖೆಗೆ ಆದೇಶ

ಪಿಟಿಐ
Published 30 ಜುಲೈ 2022, 8:58 IST
Last Updated 30 ಜುಲೈ 2022, 8:58 IST
   

ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮನೆಯಲ್ಲಿ ಪತ್ತೆಯಾದ ಹಣವನ್ನು ಶ್ರೀಲಂಕಾ ಪೊಲೀಸರು ಇಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ಜುಲೈ 9ರಂದು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದ್ದ ಜನರು, ಬ್ಯಾರಿಕೇಡ್ ಮುರಿದು ಅಂದಿನ ಅಧ್ಯಕ್ಷ ಗೊಟಬಯ ಅವರ ಮನೆಗೂ ನುಗ್ಗಿದ್ದರು. ಆದರೆ, ಅದಕ್ಕೂ ಮುನ್ನವೇ ಗೊಟಬಯ ದೇಶ ಬಿಟ್ಟು ಪರಾರಿಯಾಗಿದ್ದರು. ಈ ಸಂದರ್ಭ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿತ್ತು.

ಜನರ ಆಕ್ರೋಶಕ್ಕೆ ಬೆದರಿದ ರಾಜಪಕ್ಸ, ಜುಲೈ 13ರಂದು ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು. ಬಳಿಕ, ಸಿಂಗಪುರಕ್ಕೆ ತೆರಳಿ ಇ ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದರು.

ADVERTISEMENT

ರಾಜಪಕ್ಸ ಮನೆಯಲ್ಲಿ ಪ್ರತಿಭಟನಾಕಾರರು 1.8 ಕೋಟಿಯಷ್ಟು ಶ್ರೀಲಂಕಾ ರೂಪಾಯಿಯನ್ನು ಪತ್ತೆ ಮಾಡಿದ್ದರು.

ಕೊಲಂಬೊ ಕೇಂದ್ರ ಅಪರಾಧ ದಳದ ಪೊಲೀಸ್ ವರಿಷ್ಠಾಧಿಕಾರಿ, ಹಣವನ್ನು ಫೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಣವನ್ನು ಸಲ್ಲಿಕೆ ಮಾಡಿದ್ದಾರೆ.

ಆದರೆ, ಕಳೆದ ಮೂರು ವಾರಗಳಿಂದ ಫೋರ್ಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಣವನ್ನು ನ್ಯಾಯಾಲಯದ ವಶಕ್ಕೆ ನೀಡುವಲ್ಲಿ ಏಕೆ ವಿಳಂಬ ಮಾಡಿದ್ಧಾರೆ ಎಂದು
ನ್ಯಾಯಾಧೀಶ ತಿಲಿನಾ ಗಮೇಜ್ ಪ್ರಶ್ನಿಸಿದ್ದಾರೆ.

ಅಲ್ಲದೆ, ಹಣವನ್ನು ನ್ಯಾಯಾಲಯದ ವಶಕ್ಕೆ ನೀಡುವಲ್ಲಿ ಆಗಿರುವ ವಿಳಂಬದ ಕುರಿತು ತನಿಖೆ ನಡೆಸುವಂತೆ ಐಜಿಪಿಗೆ ಆದೇಶಿಸಿದ್ದಾರೆ.

ಇದಕ್ಕಾಗಿ ವಿಶೇಷ ತನಿಖಾ ಘಟಕದ ನಿರ್ದೇಶಕರನ್ನು ನೇಮಕ ಮಾಡುವಂತೆಯೂ ನ್ಯಾಯಾಧೀಶರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.