
ಮೆಹುಲ್ ಗೋಸ್ವಾಮಿ
ಎಕ್ಸ್ ಹಾಗೂ ಐಸ್ಟಾಕ್ ಚಿತ್ರ
ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಾ ಬೇರೊಂದು ಸಂಸ್ಥೆಗೆ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ (ಮೂನ್‌ಲೈಟ್) ಭಾರತೀಯ ಮೂಲದ 39 ವರ್ಷದ ವ್ಯಕ್ತಿಯನ್ನು ‘ಮಹಾ ದ್ರೋಹ’ ಎಂದು ಕರೆದಿರುವ ಅಲ್ಲಿನ ನ್ಯಾಯಾಲಯ, 15 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಮೆಹುಲ್ ಗೋಸ್ವಾಮಿ ಶಿಕ್ಷೆಗೆ ಗುರಿಯಾದ ನೌಕರ. ಒಂದು ಉದ್ಯೋಗದ ಗುತ್ತಿಗೆ ಸಕ್ರಿಯವಾಗಿರುವಾಗ ಅದರ ನಿಯಮ ಉಲ್ಲಂಘಿಸಿ ಬೇರೆ ಕೆಲಸ ಮಾಡುವುದು ತೆರಿಗೆದಾರರ 50 ಸಾವಿರ ಡಾಲರ್ (₹43 ಲಕ್ಷ) ವಂಚಿಸಿದ ಅಪರಾಧಕ್ಕೆ ಸಮ ಎಂದು ಸರಟೊಗಾ ಕೌಂಟಿ ಶೆರೀಫ್ ಕಚೇರಿಯು ಅಭಿಪ್ರಾಯಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಮೆಹುಲ್ ಅವರು ಮನೆಯಿಂದಲೇ ನ್ಯೂಯಾರ್ಕ್‌ನ ಸರ್ಕಾರಿ ಕಚೇರಿಗೆ ಕೆಲಸ ಮಾಡುತ್ತಿದ್ದರು. ಇದು ಅವರ ಪ್ರಾಥಮಿಕ ಉದ್ಯೋಗವಾಗಿತ್ತು. ಆದರೆ, ಅದೇ ವೇಳೆಗೆ ಮಾಲ್ಟಾದಲ್ಲಿರುವ ಗ್ಲೋಬಲ್‌ಫೌಂಡ್ರೀಸ್ ಎಂಬ ಸೆಮಿ ಕಂಡಕ್ಟರ್ ಕಂಪನಿಗೂ 2022ರಿಂದ ಕೆಲಸ ಮಾಡುತ್ತಿದ್ದರು.
ಸರ್ಕಾರಿ ಕಚೇರಿಗೆ ಬಂದ ಅನಾಮದೇಯ ಇ–ಮೇಲ್ ಒಂದು ಮೆಹುಲ್ ಅವರ ಎರಡು ದೋಣಿಯ ಪಯಣದ ಸುಳಿವು ನೀಡಿತ್ತು. ಸರ್ಕಾರಿ ನೌಕರನಾಗಿ ಕೆಲಸ ಮಾಡಬೇಕಾದ ಅವಧಿಯಲ್ಲೇ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದ ವಿವರ ಅದರಲ್ಲಿತ್ತು.
‘ಸರ್ಕಾರಿ ನೌಕರರು ತಾವು ಮಾಡುವ ಕೆಲಸವನ್ನು ಬದ್ಧತೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ವಗ್ದಾನ ಮಾಡಿರುತ್ತಾರೆ. ಆದರೆ ಮೆಹುಲ್ ಗೋಸ್ವಾಮಿ ಅವರು ಆ ನಂಬಿಕೆಯನ್ನು ಮುರಿದಿದ್ದಾರೆ. ರಾಜ್ಯಕ್ಕೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು, ಅದೇ ಸಮಯದಲ್ಲಿ ಬೇರೊಂದು ಸಂಸ್ಥೆಗೆ ಕೆಲಸ ಮಾಡುವ ಮೂಲಕ ನಂಬಿಕೆ ದ್ರೋಹದ ಜತೆಗೆ, ತೆರಿಗೆದಾರರ ಹಣವನ್ನು ನಷ್ಟ ಮಾಡಿದ್ದಾರೆ’ ಎಂದು ಇನ್‌ಸ್ಪೆಕ್ಟರ್ ಜನರಲ್ ಲೂಸಿ ಲ್ಯಾಂಗ್ ಹೇಳಿರುವುದಾಗಿ ಸಿಬಿಎಸ್6 ನ್ಯೂಸ್ ವರದಿ ಮಾಡಿದೆ.
ಅ. 15ರಂದು ಗೋಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಇವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ 15 ವರ್ಷಗಳ ಶಿಕ್ಷೆಗೆ ಇವರು ಗುರಿಯಾಗಿದ್ದಾರೆ. ಮೆಹುಲ್ ಅವರು 2024ರಲ್ಲಿ ಸರ್ಕಾರಿ ಕಚೇರಿಯಿಂದ 1.17 ಲಕ್ಷ (₹1.03ಕೋಟಿ) ಅಮೆರಿಕನ್ ಡಾಲರ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.