ADVERTISEMENT

ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೊರೊನಾ ವೈರಸ್ ಸೋಂಕು ಪೀಡಿತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 11:22 IST
Last Updated 11 ಫೆಬ್ರುವರಿ 2020, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಚೀನಾದಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದರೆ, ಕೊರೊನಾ ವೈರಸ್ ನ್ಯುಮೋನಿಯಾ ಪೀಡಿತ 33 ವರ್ಷದ ಮಹಿಳೆಯೊಬ್ಬರು ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

37 ವಾರಗಳ ಗರ್ಭಿಣಿಯು ವಾಯವ್ಯ ಚೀನಾದ ಶಾಂಗ್ಷಿ ಪ್ರಾಂತ್ಯದಲ್ಲಿ 2.73ಕೆ.ಜಿ. ತೂಕದ ಹೆಣ್ಣುಮಗುವಿಗೆ ಸೋಮವಾರ ಜನ್ಮ ನೀಡಿದ್ದಾರೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಶಿಶುವಿಗೆ ನಡೆಸಿದ ಮೊದಲ ನ್ಯೂಕ್ಲಿಯಿಕ್ ಆಮ್ಲದ ಪರೀಕ್ಷೆಯಲ್ಲಿ ನಕಾರಾತ್ಮಕ ವರದಿ ಬಂದಿದೆ. ಸದ್ಯ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಪ್ರಾಂತೀಯ ಕೇಂದ್ರ ತಿಳಿಸಿದೆ.

ADVERTISEMENT

ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಹಿಳೆಯನ್ನು ಜ್ವರದವಾರ್ಡ್ ಮತ್ತು ಮಗುವನ್ನುನವಜಾತ ಶಿಶುವಿನ ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಸದ್ಯ ಇಬ್ಬರ ಆರೋಗ್ಯವು ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಆಡಳಿತ ವಿಭಾಗದ ನಿರ್ದೇಶಕ ಲಿಯು ಮಿಂಗ್ ತಿಳಿಸಿದ್ದಾರೆ.

ಫೆಬ್ರುವರಿ 7ರಂದು ಮಹಿಳೆಯನ್ನು ಶಾಂಗ್ಲು ನಗರದ ಸೆಂಟ್ರಲ್ ಆಸ್ಪತ್ರೆಯಿಂದ ಕ್ಸಿಯಾನ್‌ನಲ್ಲಿನ ಕ್ಸಿಯಾನ್‌ ಜಿಯಾವೊ ತಾಂಗ್ ವಿಶ್ವವಿದ್ಯಾಲಯದಎರಡನೇ ಆಸ್ಪತ್ರೆಗೆವರ್ಗಾಯಿಸಲಾಯಿತು. ಈ ವೇಳೆ ತಜ್ಞ ವೈದ್ಯರ ತಂಡವು ಸೋಂಕು ಪೀಡಿತ ಮಹಿಳೆ ಮತ್ತು ಆಕೆಯ ಮಗುವಿನ ರಕ್ಷಣೆಗಾಗಿ ಅಗತ್ಯವಿದ್ದ ಸೂಕ್ತ ಚಿಕಿತ್ಸಾ ಸಿದ್ಧತೆಗಳನ್ನು ಕೈಗೊಂಡರು ಎಂದು ಲಿಯು ತಿಳಿಸಿದ್ದಾರೆ.

ಕಳೆದ ಬುಧವಾರವಷ್ಟೇ ವುಹಾನ್ ಆಸ್ಪತ್ರೆಯಲ್ಲಿ 30 ಗಂಟೆಗಳ ಪುಟ್ಟ ಮಗು ಕೊರೊನಾ ವೈರಸ್ ಸೋಂಕು ಪೀಡಿತವಾಗಿ ಜನಿಸಿತ್ತು. ಸೋಂಕು ಪೀಡಿತ ತಾಯಿಯಿಂದ ಮಗುವಿಗೆ ಸೋಂಕು ಹರಡಿತ್ತು.ಫೆಬ್ರುವರಿ 3ರಂದು ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತ ತಾಯಿಯಿಂದ ಜನಿಸಿದ ಮತ್ತೊಂದು ಮಗು ಸುರಕ್ಷಿತವಾಗಿದೆ ಎಂದು ವರದಿಯಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ವುಹಾನ್ ಮಾರುಕಟ್ಟೆಯಲ್ಲಿ ಮಾರಾಟವಾದ ಮಾಂಸದಿಂದ ಕೊರೊನಾ ವೈರಸ್ ಹರಡಿದೆಎಂದು ನಂಬಲಾಗಿದೆ. ಇದುವರೆಗೂ ಚೀನಾದಾದ್ಯಂತ 108 ಹೊಸ ಪ್ರಕರಣಗಳೊಂದಿಗೆ 1,016 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ 42,638 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಚೀನಾ ಹೊರತುಪಡಿಸಿ ಇತರೆ ದೇಶಗಳಲ್ಲಿ350 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು,ಫಿಲಿಪೈನ್ಸ್ ಮತ್ತು ಹಾಂಗ್‌ಕಾಂಗ್‌ನಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.