ADVERTISEMENT

ಮ್ಯಾನ್ಮಾರ್‌: ಸೇನಾ ದಾಳಿಗೆ 21 ಜನರ ಸಾವು

ಏಜೆನ್ಸೀಸ್
Published 16 ಆಗಸ್ಟ್ 2025, 15:43 IST
Last Updated 16 ಆಗಸ್ಟ್ 2025, 15:43 IST
   

ಬ್ಯಾಂಗ್‌ಕೊಕ್‌: ಆಗ್ನೇಯ ಏಷ್ಯಾದ ಮ್ಯಾನ್ಮಾರ್‌ನ ಲಾಭದಾಯಕ ರತ್ನ ಗಣಿಗಾರಿಕೆಯ ಕೇಂದ್ರ ಸ್ಥಾನ ಮೊಗೋಕ್‌ ನಗರದ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಗರ್ಭಿಣಿ ಸೇರಿದಂತೆ ಕನಿಷ್ಠ 21 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಜನಾಂಗೀಯ ಬಂಡುಕೋರ ಪಡೆ, ಸ್ಥಳೀಯರು ಮತ್ತು ಮ್ಯಾನ್ಮಾರ್ ಸಾಮಾಜಿಕ ಮಾಧ್ಯಮಗಳು ಶನಿವಾರ ತಿಳಿಸಿವೆ.

2021ರ ಫೆಬ್ರವರಿಯಲ್ಲಿ ಮ್ಯಾನ್ಮಾರ್‌ ಸೇನೆ ಅಧಿಕಾರವನ್ನು ತನ್ನ ತೆಕ್ಕೆಗೆ ತಗೆದುಕೊಂಡ ನಂತರ ಇಲ್ಲಿನ ಜನಾಂಗೀಯ ಸಶಸ್ತ್ರ ಪಡೆಗಳಿಂದ ಈ ಪ್ರಾಂತ್ಯವನ್ನು ವಾಪಸ್ ಪಡೆದುಕೊಳ್ಳಲು ಸೇನೆಯು ಸರಣಿ ವಾಯುದಾಳಿಗಳನ್ನು ನಡೆಸಿದೆ. ಹಲವು ನಾಗರಿಕರು ಈ ದಾಳಿಗಳಿಗೆ ಬಲಿಯಾಗುತ್ತಿದ್ದಾರೆ.

ಗುರುವಾರ ರಾತ್ರಿ 8.30ರ ಸುಮಾರಿಗೆ ಸೇನೆ ದಾಳಿ ನಡೆಸಿದೆ ಎಂದು ಜನಾಂಗೀಯ ಬಂಡುಕೋರ ಸಂಘಟನೆ ತಾ ಆಂಗ್‌ ನ್ಯಾಷನಲ್‌ ಲಿಬರೇಷನ್ ಆರ್ಮಿ (ಟಿಎನ್‌ಎಲ್‌ಎ) ವಕ್ತಾರ ಲೇ ವೆ ಯಾಯೂ ತಿಳಿಸಿದ್ದಾರೆ. ಬೌದ್ಧ ಮಂದಿರವನ್ನು ಗುರಿಯಾಗಿಸಿ ಜೆಟ್ ವಿಮಾನ ಮೂಲಕ ಬಾಂಬ್‌ ದಾಳಿ ಮಾಡಿದ್ದು, 16 ಮಹಿಳೆಯರೂ ಸೇರಿ 21 ಮಂದಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ 30ಕ್ಕೆ ಏರಿಕೆ ಆಗಬಹುದು ಎಂದು ಸಾಮಾಜಿಕ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಪ್ರಜಾಪ್ರಭುತ್ವ ಪರವಾದ ಹೋರಾಟ ಮಾಡುತ್ತಿರುವ ಶಸ್ತ್ರಸಜ್ಜಿತ ಪ್ರಜಾ ಪ್ರತಿರೋಧಕ ಪಡೆ, ಜನಾಂಗೀಯ ಬಂಡುಕೋರ ಸಂಘಟನೆಗಳ ವಿರುದ್ಧ ಸೇನಾಡಳಿತ ವಾಯುದಾಳಿಗಳನ್ನು ನಡೆಸುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.