ADVERTISEMENT

ಯೆಮನ್‌ನ ಜ್ವಾಲಾಮುಖಿ ದ್ವೀಪದಲ್ಲಿ ನಿಗೂಢ ವಾಯುನೆಲೆ!

ಪಿಟಿಐ
Published 25 ಮೇ 2021, 11:57 IST
Last Updated 25 ಮೇ 2021, 11:57 IST
ಯೆಮನ್‌ನ ಮಯುನ್ ದ್ವೀಪದಲ್ಲಿ ನಿರ್ಮಾಣವಾಗಿರುವ ವಾಯುನೆಲೆ
ಯೆಮನ್‌ನ ಮಯುನ್ ದ್ವೀಪದಲ್ಲಿ ನಿರ್ಮಾಣವಾಗಿರುವ ವಾಯುನೆಲೆ   

ದುಬೈ: ಯೆಮನ್‌ನ ಜ್ವಾಲಾಮುಖಿ ದ್ವೀಪದಲ್ಲಿ ನಿಗೂಢ ವಾಯುನೆಲೆಯೊಂದು ನಿರ್ಮಾಣಗೊಳ್ಳುತ್ತಿದೆ. ಅಚ್ಚರಿಯ ಇಂಧನ ಮತ್ತು ವಾಣಿಜ್ಯ ಸರಕು ಸಾಗಾಣೆ ದೃಷ್ಟಿಯಿಂದ ವಿಶ್ವದ ನಿರ್ಣಾಯಕ ಎನಿಸುವ ಸ್ಥಳದಲ್ಲಿ ಈ ವಾಯುನೆಲೆ ಇದೆ.

ಬಾಬ್ ಎಲ್-ಮಂಡೇಬ್ ಜಲಸಂಧಿಯ ಮಯುನ್ ದ್ವೀಪದಲ್ಲಿ ನಿರ್ಮಾಣವಾಗಿರುವ ವಾಯುನೆಲೆ ಯಾರದ್ದು ಎಂಬುದು ಈ ವರೆಗೆ ಖಚಿತವಾಗಿಲ್ಲ. ಯಾವ ದೇಶಗಳೂ ಇದು ತಮ್ಮದೆಂದು ಹೇಳಿಕೊಂಡಿಲ್ಲ.

ಈ ನಿರ್ಮಾಣದ ಹಿಂದೆ ಯುನೈಟೆಡ್‌ ಅರಬ್‌ ಎಮಿರೆಟ್ಸ್‌(ಯುಎಇ) ಕೈವಾಡವಿದೆ ಎಂದು ಯೆಮನ್‌್‌ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಯೆಮನ್‌ನ ಹೌತಿ ಬಂಡುಕೋರರ ವಿರುದ್ಧದ ತನ್ನ ಮಿಲಿಟರಿ ಕಾರ್ಯಾಚರಣೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿರುವುದಾಗಿ ಯುಎಇ 2019ರಲ್ಲೇ ಹೇಳಿದೆ.

ADVERTISEMENT
ಮಯುನ್ ದ್ವೀಪದಲ್ಲಿ ನಿರ್ಮಾಣವಾಗಿರುವ ವಾಯುನೆಲೆ ಗೂಗಲ್‌ ಅರ್ಥ ಚಿತ್ರ

'ಆ ಜಾಗದಲ್ಲಿ ಶಾಶ್ವತ ಉಪಸ್ಥಿತಿಯನ್ನು ಸ್ಥಾಪಿಸುವ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿ ವಾಯುನೆಲೆ ಕಾಣಿಸುತ್ತಿದೆ,' ಎಂದು ಗುಪ್ತಚರ ಸಂಸ್ಥೆ 'ಜೇನ್ಸ್‌'ನ ಮಧ್ಯಪ್ರಾಚ್ಯ ವಿಭಾಗದ ಸಂಪಾದಕ ಜೆರೆಮಿ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ. ಜೆರೆಮಿ ಬಿನ್ನಿ ಅವರು ಹಲವು ವರ್ಷಗಳಿಂದ ಈ ನಿರ್ಮಾಣದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈ ನಿರ್ಮಾಣವು ಯೆಮನ್‌್‌ ಯುದ್ಧದ ದೃಷ್ಟಿಯಿಂದ ಮಾತ್ರವಲ್ಲ, ಹಡಗುಗಳ ಸಂಚಾರದ ದೃಷ್ಟಿಯಿಂದಲೂ ಪ್ರಮುಖ ಎನಿಸುತ್ತದೆ,' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾಣದ ಹಿಂದೆ ಯುಎಇ ಇದೆ ಎಂಬ ಯೆಮನ್‌್‌ನ ಆರೋಪಗಳಿಗೆ ಯುಎಇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದಲ್ಲಿರುವ ಆ ದೇಶದ ರಾಯಭಾರ ಕಚೇರಿಯ ಅಧಿಕಾರಿಗಳೂ ಉತ್ತರಿಸಿಲ್ಲ.

ಮಯುನ್ ದ್ವೀಪದ ಈ ವಾಯುನೆಲೆ ನಿರ್ಮಿಸುತ್ತಿರುವವರಿಗೆ ಮತ್ತು ಅದನ್ನು ನಿಯಂತ್ರಿಸುವವರಿಗೆ ಬಾಬ್ ಎಲ್-ಮಂಡೇಬ್ ಜಲಸಂಧಿಯ ಮೇಲೆ ಸಂಪೂರ್ಣ ಹಿಡಿತ ಸಿಗಲಿದೆ. ಜತೆಗೆ, ಯೆಮನ್‌ ಒಳನಾಡಿನ ಮೇಲೆ ವಾಯುದಾಳಿ ನಡೆಸುವಷ್ಟು ಶಕ್ತಿಯನ್ನು ಈ ವಾಯುನೆಲೆ ನೀಡುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಇದಿಷ್ಟೇ ಅಲ್ಲದೆ, ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಹತ್ತಿರದ ಪೂರ್ವ ಆಫ್ರಿಕಾದ ಯಾವುದೇ ಕಾರ್ಯಾಚರಣೆಗಳಿಗೆ ಇದು ಸೂಕ್ತ ವಾಯುನೆಲೆ ಎನಿಸಿಕೊಳ್ಳಲಿದೆ.

'ಪ್ಲಾನೆಟ್ ಲ್ಯಾಬ್ಸ್ ಐಎನ್‌ಸಿ' ಏ. 11ರಂದು ತೆಗೆದ ಚಿತ್ರದಲ್ಲಿ ಮಯುನ್ ದ್ವೀಪದಲ್ಲಿ ಟ್ರಕ್‌ಗಳು ಮತ್ತು ಗ್ರೇಡರ್‌ಗಳನ್ನು ಬಳಸಿ 1.85 ಕಿ.ಮೀ ಉದ್ದದ ರನ್‌ವೇ ನಿರ್ಮಿಸುತ್ತಿರುವುದು ಗೋಚರಿಸಿತ್ತು. ಮೇ. 18ರ ಹೊತ್ತಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವುದೂ ಚಿತ್ರಗಳಲ್ಲಿ ಸ್ಪಷ್ಟವಾಗಿದೆ. ಈ ಚಿತ್ರಗಳು ಸುದ್ದಿ ಸಂಸ್ಥೆ 'ಅಸೋಸಿಯೇಟೆಡ್‌ ಪ್ರೆಸ್‌'ಗೆ ಲಭ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.