ADVERTISEMENT

ಜೈಲಿನಿಂದ ಬಿಡುಗಡೆಯಾದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್

ಏಜೆನ್ಸೀಸ್
Published 20 ಸೆಪ್ಟೆಂಬರ್ 2018, 2:06 IST
Last Updated 20 ಸೆಪ್ಟೆಂಬರ್ 2018, 2:06 IST
ಬಿಗಿ ಭದ್ರತೆಯ ನಡುವೆ ಷರೀಫ್‌ ಅವರನ್ನು ಜೈಲಿನಿಂದ ಕರೆದೊಯ್ಯಲಾಯಿತು – ಚಿತ್ರ ಕೃಪೆ: ಡಾನ್
ಬಿಗಿ ಭದ್ರತೆಯ ನಡುವೆ ಷರೀಫ್‌ ಅವರನ್ನು ಜೈಲಿನಿಂದ ಕರೆದೊಯ್ಯಲಾಯಿತು – ಚಿತ್ರ ಕೃಪೆ: ಡಾನ್   

ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಬಿಡುಗಡೆಯಾಗಿದ್ದಾರೆ. ಷರೀಫ್‌, ಅವರ ಪುತ್ರಿ ಮರಿಯಂ ಮತ್ತು ಅಳಿಯ ಸಫ್ದಾರ್‌ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಬುಧವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ವೇಳೆ ಷರೀಫ್‌ ಸ್ವಾಗತಕ್ಕೆ ಪಿಎಂಎಲ್‌–ಎನ್‌ (ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್) ಪಕ್ಷದ ಹಿರಿಯ ನಾಯಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು ಎಂದು ಡಾನ್ ಜಾಲತಾಣ ವರದಿ ಮಾಡಿದೆ.

ಷರೀಫ್ ಬಿಡುಗಡೆ ವೇಳೆ ಜೈಲಿನ ಆವರಣದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಬಿಡುಗಡೆಯಾದ ಬಳಿಕ ಅವರು ಲಾಹೋರ್‌ಗೆ ತೆರಳಿದ್ದಾರೆ. ತಡರಾತ್ರಿ ಲಾಹೋರ್‌ನ ಹಜ್ ಟರ್ಮಿನಲ್‌ಗೆ ಬಂದ ಅವರಿಗೆ ಭವ್ಯ ಸ್ವಾಗತ ದೊರೆಯಿತು. ನಂತರ ಅವರು ಲಾಹೋರ್‌ ಹೊರವಲಯದಲ್ಲಿರುವ ನಿವಾಸಕ್ಕೆ ತೆರಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಶಿಕ್ಷೆ ರದ್ದುಮಾಡಿದ್ದ ಹೈಕೋರ್ಟ್‌: ಷರೀಫ್‌, ಮರಿಯಂ ಮತ್ತು ಸಫ್ದಾರ್‌ ಅವರಿಗೆ ನೀಡಲಾಗಿದ್ದ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್‌ ಬುಧವಾರ ರದ್ದುಪಡಿಸಿತ್ತು. ಲಂಡನ್‌ನಲ್ಲಿ ಐಷಾರಾಮಿ ಫ್ಲಾಟ್ ಖರೀದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲುಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೂವರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ನಡೆಸಿತ್ತು.

ಜೈಲಿನಿಂದ ಹೊರಬಂದು ಲಾಹೋರ್‌ಗೆ ತೆರಳಲು ಕಾರನ್ನೇರಿದ ಷರೀಷ್‌ಗೆ ಬೆಂಬಲಿಗರಿಂದ ಸ್ವಾಗತ – ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT