
ಕಠ್ಮಂಡು: ನೇಪಾಳದಲ್ಲಿ 2026ರ ಮಾರ್ಚ್ 5ಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಭದ್ರತೆಗೆ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ) ಶಿಫಾರಸು ಮಾಡಿದೆ.
ದೇಶದ ಭದ್ರತಾ ಸ್ಥಿತಿಯನ್ನು ಎನ್‌ಎಸ್‌ಸಿ ಗುರುವಾರ ಅವಲೋಕಿಸಿತು. ಈ ವೇಳೆ ಸಂವಿಧಾನದಲ್ಲಿರುವ ಅವಕಾಶ ಬಳಸಿ ಸೇನೆಯನ್ನು ಚುನಾವಣಾ ಬಂದೋಬಸ್ತ್‌ಗೆ ನಿಯೋಜಿಸುವಂತೆ ಸಂಪುಟಕ್ಕೆ ಸಲಹೆ ನೀಡಿತು.
‘ಮುಕ್ತ, ನ್ಯಾಯಸಮ್ಮತ ಮತ್ತು ಭಯಮುಕ್ತ ಚುನಾವಣೆ ನಡೆಸಲು ಶಿಫಾರಸುಗಳನ್ನು ಮಾಡಲಾಗಿದೆ’ ಎಂದು ಎನ್‌ಎಸ್‌ಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ರಕ್ಷಣಾ ಕಾರ್ಯದರ್ಶಿ ಸುಮನ್ ರಾಜ್ ಅರ್ಯಾಲ್ ತಿಳಿಸಿದ್ದಾರೆ.
ಈಗಾಗಲೇ ನೇಪಾಳ ಸೇನೆ, ಪೊಲೀಸರು, ಸಶಸ್ತ್ರ ಪೊಲೀಸ್ ಪಡೆಗಳು, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ತಾತ್ಕಾಲಿಕ ಪೊಲೀಸರನ್ನು ಒಳಗೊಂಡ ಸಮಗ್ರ ಭದ್ರತಾ ವ್ಯವಸ್ಥೆಯೊಂದಕ್ಕೆ ಗೃಹ ಇಲಾಖೆ ಒಪ್ಪಿಗೆ ನೀಡಿದೆ.
ಭ್ರಷ್ಟಾಚಾರ ಖಂಡಿಸಿ ಮತ್ತು ಸಾಮಾಜಿಕ ಮಾಧ್ಯಮಗಳ ನಿಷೇಧ ವಿರೋಧಿಸಿ ಜೆನ್–ಝಿ ನಡೆಸಿದ್ದ ಪ್ರತಿಭಟನೆ ಹಿಂಸಾಸ್ವರೂಪ ಪಡೆದ ನಂತರ ಸೆಪ್ಟೆಂಬರ್ 9ರಂದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ರಾಜೀನಾಮೆ ನೀಡಿದ್ದರು. ಸುಶೀಲಾ ಕಾರ್ಕಿ ಅವರು ಸೆಪ್ಟೆಂಬರ್ 12ರಂದು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ನೇಪಾಳದಲ್ಲಿ 2026ರ ಮಾರ್ಚ್ 5ಕ್ಕೆ ಚುನಾವಣೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.