ADVERTISEMENT

ಭಾರತದ ಭೂಭಾಗವನ್ನೂ ಒಳಗೊಂಡ ಪರಿಷ್ಕೃತ ಭೂಪಟಕ್ಕೆ ನೇಪಾಳ ಸಂಸತ್‌ ಒಪ್ಪಿಗೆ

ಸಂಸತ್‌ನ ಮೇಲ್ಮನೆಯಲ್ಲಿ ಸರ್ವಾನುಮತದ ಅಂಗೀಕಾರ

ಪಿಟಿಐ
Published 18 ಜೂನ್ 2020, 8:40 IST
Last Updated 18 ಜೂನ್ 2020, 8:40 IST
ಪರಿಷ್ಕೃತ ಭೂಪತ ರಚಿಸುವ ಸಂವಿಧಾನ ತಿದ್ದುಪಡಿ ಮಸೂದೆ ಕುರಿತು ನೇಪಾಳದ ಸಂಸತ್‌ನಲ್ಲಿ ಚರ್ಚೆ (ಎಎಫ್‌ಪಿ ಚಿತ್ರ)
ಪರಿಷ್ಕೃತ ಭೂಪತ ರಚಿಸುವ ಸಂವಿಧಾನ ತಿದ್ದುಪಡಿ ಮಸೂದೆ ಕುರಿತು ನೇಪಾಳದ ಸಂಸತ್‌ನಲ್ಲಿ ಚರ್ಚೆ (ಎಎಫ್‌ಪಿ ಚಿತ್ರ)   

ಕಠ್ಮಂಡು: ಭಾರತದ ಕೆಲ ಭೂ ಭಾಗಗಳನ್ನೂ ಒಳಗೊಂಡ ನೇಪಾಳದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಲ್ಲಿನ ಸಂಸತ್‌ ಗುರುವಾರ ಸರ್ವಾನುಮತದಿಂದ ಅನುಮೋದಿಸಿದೆ.

ದಕ್ಷಿಣ ಏಷ್ಯಾ ಭಾಗದ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ದಿನೇ ದಿನೇಹಳಸುತ್ತಿರುವ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿ ಸಹಜವಾಗಿಯೇ ಪ್ರಾಮುಖ್ಯತೆ ಪಡೆದಿದೆ.

ADVERTISEMENT
ಪರಿಷ್ಕೃತ ಭೂಪತ ಸಿದ್ಧಪಡಿಸುವ ಸಂವಿಧಾನ ತಿದ್ದುಪಡಿ ಮಸೂದಗೆ ಸಹಿ ಹಾಕುತ್ತಿರುವ ನೇಪಾಳ ಸಂಸದರು

ಹೊಸ ಭೂಪಟ ತಯಾರಿಸುವ ಇದೇ ಮಸೂದೆಯನ್ನು ನೇಪಾಳ ಸಂಸತ್‌ನ ಕೆಳಮನೆಯು ಶನಿವಾರ ಅಂಗೀಕರಿಸಿತ್ತು. ಹೀಗಿರುವಾಗಲೇ ಬುಧವಾರ ಮೇಲ್ಮನೆಯು ಮಸೂದೆಗೆ ಸರ್ವಾನುಮತದ ಅನುಮೋದನೆ ನೀಡಿದೆ. ಸದನದ 57 ಸದಸ್ಯರೂ ಮಸೂದೆ ಪರವಾಗಿಯೇ ಮತ ಚಲಾವಣೆ ಮಾಡಿದ್ದಾರೆ.

‘ನೇಪಾಳದ ಪ್ರಾದೇಶಿಕ ವಿಸ್ತರಣೆಯನ್ನು ಒಪ್ಪಲಾಗದು,’ ಎಂದು ಭಾರತ ಈಗಾಗಲೇ ಹೇಳಿದೆ. ನೇಪಾಳ ತನ್ನ ಭೂಪಟದಲ್ಲಿ ಉಲ್ಲೇಖಿಸಿರುವ ಪ್ರದೇಶಗಳು ನಮ್ಮವೇ ಎಂದು ಭಾರತ ಹಲವು ಐತಿಹಾಸಿಕ ದಾಖಲೆಗಳ ಮೂಲಕ ಪ್ರತಿಪಾದಿಸಿದೆ.
ಭಾರತದ ಭೂಪ್ರದೇಶಗಳಾಗಿರುವ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ತಮ್ಮವು ಎಂದು ವಾದಿಸುತ್ತಿರುವ ನೇಪಾಳ, ಇವುಗಳನ್ನು ತನ್ನ ನೂತನ ಭೂಪಟದಲ್ಲಿ ಉಲ್ಲೇಖಿಸಿದೆ.

ಮೇ 8 ರಂದು ಉತ್ತರಾಖಂಡದ ಧಾರ್ಚುಲಾದಿಂದ ಲಿಪುಲೇಖಕ್ಕೆ ಸಂಪರ್ಕ ಕಲ್ಪಿಸುವ 80 ಕಿ.ಮೀಗಳ ರಕ್ಷಣಾ ಕಾರ್ಯತಂತ್ರ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದದ್ದರು. ಇದಾದ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿದೆ.
ಭಾರತ ನಿರ್ಮಿಸುತ್ತಿರುವ ರಸ್ತೆಯು ತನ್ನ ಭೂ ಪ್ರದೇಶವಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳ ಮೂಲಕ ಹಾದು ಹೋಗುತ್ತದೆ ಎಂದು ನೇಪಾಳ ವಾದಿಸಿದೆ. ಅಲ್ಲದೆ, ರಾಜನಾಥ್‌ ಸಿಂಗ್‌ ಅವರು ರಸ್ತೆ ಕಾಮಗಾರಿ ಉದ್ಘಾಟಿಸಿದ ಮರು ದಿನವೇ ನೇಪಾಳ ತನ್ನ ಹೊಸ ಭೂಪಟವನ್ನೂ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.