ADVERTISEMENT

ರಫಾ ಮೇಲಿನ ದಾಳಿ ‘ದುರಂತಮಯ ಪ್ರಮಾದ’: ಇಸ್ರೇಲ್ ಪ್ರಧಾನಿ ಹೇಳಿಕೆ

ಏಜೆನ್ಸೀಸ್
Published 28 ಮೇ 2024, 23:43 IST
Last Updated 28 ಮೇ 2024, 23:43 IST
   

ಟೆಲ್‌ ಅವಿವ್: ಗಾಜಾದ ದಕ್ಷಿಣ ಭಾಗದ ನಗರ ರಫಾವನ್ನು ಗುರಿಯಾಗಿಸಿ ಸೋಮವಾರ ಇಸ್ರೇಲ್‌ನ ಸೇನೆಯು ನಡೆಸಿದ ವಾಯುದಾಳಿಯು ‘ದುರಂತಮಯ ಪ್ರಮಾದ’ ಎಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಹೇಳಿದ್ದಾರೆ.

ಇಸ್ರೇಲ್‌ ಸೇನೆಯ ದಾಳಿಯಿಂದಾಗಿ ಪ್ಯಾಲೆಸ್ಟೀನಿಯರು ಆಶ್ರಯ ಪಡೆದಿದ್ದ ಶಿಬಿರಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಹಲವರು ನಿರಾಶ್ರಿತರಾಗಿದ್ದರು. 45 ಮಂದಿ ಮೃತಪಟ್ಟಿದ್ದರು.

‘ಈ ದಾಳಿಯಿಂದಾಗಿ ಇಸ್ರೇಲ್‌ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಹಮಾಸ್‌ ವಿರುದ್ಧದ ಯುದ್ಧಕ್ಕೆ ಟೀಕೆಗೆ ಗುರಿಯಾಗಿದ್ದೇವೆ. ನಾಗರಿಕರು ಸಾವಿಗೆ ಕಾರಣವಾಗಿದ್ದ ಸೋಮವಾರದ ದಾಳಿಗೆ ಆಪ್ತರಾಷ್ಟ್ರಗಳೂ ಅಸಮಾಧಾನ ವ್ಯಕ್ತಪಡಿಸಿವೆ’ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ADVERTISEMENT

ಇಸ್ರೇಲ್‌ ತಾನು ಅಂತರರಾಷ್ಟ್ರೀಯ ಕಾಯ್ದೆಗೆ ಬದ್ಧವಿರುವುದಾಗಿ ಹೇಳುತ್ತಿದೆ. ಅದರ ಹಲವು ನಡೆಗಳು ವಿಶ್ವದ ಉನ್ನತ ಕೋರ್ಟ್‌ಗಳಲ್ಲಿ ವಿಚಾರಣೆಯ ಹಂತದಲ್ಲಿವೆ. 

ಪ್ರಮಾದ ಯಾವ ಸ್ವರೂಪದ್ದು ಎಂದು ನೆತನ್ಯಾಹು ಅವರು ಹೇಳಿಲ್ಲ. ಇಸ್ರೇಲ್‌ ಸೇನೆಯು ಆರಂಭದಲ್ಲಿ ತಾನು ಹಮಾಸ್‌ ನೆಲೆ ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಹೇಳಿತ್ತು. ದಾಳಿಯ ವಿವರ ಮತ್ತು ಬೆಂಕಿ ಹೊತ್ತಿಕೊಂಡಿದ್ದ ವಿವರಗಳು ಬಯಲಾಗುತ್ತಿದ್ದಂತೆ, ನಾಗರಿಕರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ಇಸ್ರೇಲ್‌ನ ಸೇನೆಯು ತಿಳಿಸಿತ್ತು.

ಸೋಮವಾರದ ದಾಳಿ ಕುರಿತು ಹೇಳಿಕೆ ನೀಡಿರುವ ಇಸ್ರೇಲ್‌ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್‌ ಹಗರಿ ಅವರು, ‘ವಾಯುದಾಳಿಗೆ 17 ಕೆ.ಜಿ. ತೂಕದ ಎರಡು ಶಸ್ತ್ರಾಸ್ತ್ರಗಳನ್ನಷ್ಟೆ ಬಳಸಿದ್ದು, ನಂತರ ಆದ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು’ ಎಂದು ತಿಳಿಸಿದ್ದಾರೆ.

ದಾಳಿ ನಡೆಸಿದ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತೆ ಎಂಬ ಸಾಧ್ಯತೆಗಳ ಕುರಿತು ಸೇನೆಯು ಪರಿಶೀಲನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.