ಬೆಂಜಮಿನ್ ನೆತನ್ಯಾಹು
(ಪಿಟಿಐ ಚಿತ್ರ)
ಜೆರುಸಲೇಂ: ಗಾಜಾದಲ್ಲಿ ಹಮಾಸ್ ಬಂಡುಕೋರರನ್ನು ವಿರೋಧಿಸುವ ಸಶಸ್ತ್ರ ಗುಂಪಿಗೆ ಇಸ್ರೇಲ್ ಬೆಂಬಲ ನೀಡುತ್ತಿದೆ ಎಂಬುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ.
ಹಮಾಸ್ ವಿರೋಧಿ ಗುಂಪಿಗೆ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು ಇಸ್ರೇಲ್‌ನ ಮಾಜಿ ಸಚಿವರೊಬ್ಬರು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಯಾಸರ್ ಅಲ್ ಶಬಾಬ್ ನೇತೃತ್ವದ ಸ್ಥಳೀಯ ‘ಬದಾವಿ’ ಬುಡಕಟ್ಟು ಗುಂಪಿಗೆ ಇಸ್ರೇಲ್ ಬೆಂಬಲ ನೀಡುತ್ತಿದೆ ಎಂದು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ಮಾಧ್ಯಮಗಳು ವರದಿ ಮಾಡಿದ್ದವು.
ಗಾಜಾದಲ್ಲಿ ಪ್ಯಾಲೆಸ್ಟೀನಿ ನಿವಾಸಿಗಳ ಮೇಲಿನ ತನ್ನ ಹಿಡಿತವನ್ನು ಹಮಾಸ್ ಕಳೆದುಕೊಳ್ಳುತ್ತಿದೆ ಎಂಬುದನ್ನು ಬಿಂಬಿಸಲು ಇಸ್ರೇಲ್ ಈ ಹೆಜ್ಜೆಯಿಟ್ಟಿದೆ ಎಂದು ವಿಶ್ಲೇಷಿಸಲಾಗಿದೆ. ಗಾಜಾಕ್ಕೆ ವಿದೇಶದಿಂದ ಬರುವ ಪರಿಹಾರ ಸಾಮಗ್ರಿಗಳನ್ನು ಕೊಳ್ಳೆಹೊಡೆದ ಆರೋಪ ಯಾಸರ್ ಅಲ್ ಶಬಾಬ್ ಮೇಲಿದೆ.
‘ಗಾಜಾದಲ್ಲಿ ಹಮಾಸ್ ಅನ್ನು ವಿರೋಧಿಸುವ ಗುಂಪುಗಳನ್ನು ಇಸ್ರೇಲ್ ಸಕ್ರಿಯಗೊಳಿಸಿದೆ’ ಎಂದು ನೆತನ್ಯಾಹು ಹೇಳಿದ್ದಾರೆ. ಇದನ್ನು ಇಸ್ರೇಲಿ ಸೈನಿಕರ ಪ್ರಾಣ ಉಳಿಸಲು ತೆಗೆದುಕೊಂಡ ‘ಉತ್ತಮ ನಿರ್ಧಾರ’ ಎಂದಿದ್ದಾರೆ. ‘ಅದರಲ್ಲಿ ತಪ್ಪೇನಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರು ಪ್ರಶ್ನಿಸಿದ್ದಾರೆ. ಭದ್ರತಾ ಅಧಿಕಾರಿಗಳ ಸಲಹೆಯ ನಂತರ ಈ ಕ್ರಮಕ್ಕೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ ಹಮಾಸ್ ವಿರೋಧಿ ಗುಂಪಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿರುವ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.