ADVERTISEMENT

ಇಸ್ರೇಲ್: ಪ್ರಧಾನಿ ನೇತನ್ಯಾಹು ಅಧಿಕಾರದ ಅಂತ್ಯ ಸನ್ನಿಹಿತ?

ರಾಯಿಟರ್ಸ್
Published 8 ಜೂನ್ 2021, 16:30 IST
Last Updated 8 ಜೂನ್ 2021, 16:30 IST
ಬೆಂಜಮಿನ್ ನೇತನ್ಯಾಹು
ಬೆಂಜಮಿನ್ ನೇತನ್ಯಾಹು   

ಜೆರುಸಲೆಂ (ರಾಯಿಟರ್ಸ್‌): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಸುದೀರ್ಘ ಅವಧಿಯ ಅಧಿಕಾರದ ಪರ್ವ ಭಾನುವಾರ ಅಂತ್ಯಗೊಳ್ಳುವ ಸಂಭವವಿದೆ. ದೇಶದ ಸಂಸತ್ತು ಅಂದು, ವಿಭಿನ್ನ ಪಕ್ಷಗಳು ಒಟ್ಟುಗೂಡಿ ಸರ್ಕಾರ ರಚಿಸುವುದಕ್ಕೆ ಸಹಮತ ವ್ಯಕ್ತಪಡಿಸುವ ಸಾಧ್ಯತೆ ನಿಚ್ಚಳವಾಗಿವೆ.

‘ಹಾಗೆಯೇ ಆಗುತ್ತದೆ’ ಎಂದು ವಿರೋಧಪಕ್ಷದ ನಾಯಕ, ಸೆಂಟ್ರಿಸ್ಟ್‌ ಯೆಷ್ ಅಟಿಡ್ ಪಕ್ಷದ ಯಯಿರ್‌ ಲ್ಯಾಪಿಡ್‌ ಅವರು ಟ್ವೀಟ್‌ ಮಾಡಿದ್ದಾರೆ. ಜನಪ್ರತಿನಿಧಿಗಳ ಸಭೆಯ ಸ್ಪೀಕರ್‌ ಅವರು ಜೂನ್ 13ರಂದು ವಿಶೇಷ ಅಧಿವೇಶನ ಕರೆದಿದ್ದಾರೆ. ನೇತನ್ಯಾಹು ಅವರು 2009ರಿಂದಲೂ ಅಧಿಕಾರದಲ್ಲಿದ್ದಾರೆ.

ಸದ್ಯ 120 ಸದಸ್ಯ ಬಲದ ಜನಪ್ರತಿನಿಧಿಗಳ ಸಭೆಯಲ್ಲಿ ರೈಟ್‌ ವಿಂಗ್, ಲೆಫ್ಟ್ ವಿಂಗ್, ಸೆಂಟ್ರಿಸ್ಟ್‌ ಮತ್ತು ಅರಬ್‌ ಪಕ್ಷಗಳ ಮೈತ್ರಿಯು ಬಹುಮತ ಹೊಂದಿವೆ. ಮೈತ್ರಿ ಸರ್ಕಾರದ ರಚನೆಗೆ ಸಂಸತ್ತು ಅನುಮೋದನೆ ನೀಡಿದರೆ, ಆ ದಿನವೇ ನೂತನ ಸರ್ಕಾರ ಅಧಿಕಾರಕ್ಕೆ ಬರುವ ಸಂಭವ ಇದೆ.

ADVERTISEMENT

ಮೈತ್ರಿಕೂಟದ ನಫ್ತಾಲಿ ಬೆನೆಟ್‌ ಅವರು ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಇಸ್ರೇಲ್‌ ದೇಶ ಮತ್ತು ಇಲ್ಲಿನ ಜನರ ಹಿತದೃಷ್ಟಿಯಿಂದ ಮೈತ್ರಿಕೂಟದ ಯೂನಿಟಿ ಸರ್ಕಾರ ಅಧಿಕಾರಕ್ಕೆ ಬರುವ ದಿನ ಹತ್ತಿರವಾಗುತ್ತಿದೆ ಎಂದು ಲ್ಯಾಪಿಡ್‌ ತಮ್ಮ ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನೇತನ್ಯಾಹು ಅವರ ಅಧಿಕಾರ ಅಂತ್ಯವಾಗುತ್ತಿರುವ ಸೂಚನೆಯ ಹಿಂದೆಯೇ ಅವರ ಪಕ್ಷ ಲಿಕುಡ್‌ ಪಾರ್ಟಿಯ ಸದಸ್ಯರು, ಹೊಸ ಪ್ರಸ್ತಾವಕ್ಕೆ ಸಂಸತ್ತು ಅನುಮೋದನೆ ನೀಡದಂತೆ ತಡೆಯಲು ಕೊನೆಯವರೆಗೂ ಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಇದುವರೆಗೂ ಇಂತಹ ಮಾತುಕತೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ.

ಹೊಸ ಮೈತ್ರಿಕೂಟದ ಒಪ್ಪಂದದ ಅನುಸಾರ, ಮಾಜಿ ರಕ್ಷಣಾ ಸಚಿವರೂ ಆಗಿರುವ ಬೆನೆಟ್ ಅವರು 2023ರವರೆಗೂ ಪ್ರಧಾನಿಯಾಗಿ ಇರುತ್ತಾರೆ. ಆ ನಂತರ, ಹಿಂದೆ ಹೆಸರಾಂತ ಟಿ.ವಿ. ನಿರೂಪಕರಾಗಿದ್ದ ಲ್ಯಾಪಿಡ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ.

ಇಸ್ರೇಲ್–ಪ್ಯಾಲೆಸ್ಟೀನ್‌ ತಿಕ್ಕಾಟ, ಜೀವಿಷ್‌ ಪುನರ್ವಸತಿ ಸೇರಿದಂತೆ ಪ್ರಮುಖ ಬೆಳವಣಿಗೆಗಳು ಬಾಧಿಸದೇ ಇದ್ದರೆ ಬಹುತೇಕ ಈಗಿನ ಒಪ್ಪಂದವು ಸಾಂಗವಾಗಿ ಮುಂದುವರಿಯುವುದು ನಿಚ್ಚಳವಾಗಿದೆ. ಮೈತ್ರಿಕೂಟದ ಹೊಸ ಸರ್ಕಾರವು, ಸಾಮಾಜಿಕ ನೀತಿ ಮತ್ತು ಆರ್ಥಿಕತೆ ಚೇತರಿಕೆ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.