ನ್ಯೂ ಅರ್ಲಿನ್ಸ್‌ನಲ್ಲಿ ದಾಳಿ ನಡೆದ ಸ್ಥಳ
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಹೊಸ ವರ್ಷದ ದಿನ ಅಮೆರಿಕದ ಲೂಸಿಯಾನಾ ರಾಜ್ಯದ ನ್ಯೂ ಅರ್ಲಿನ್ಸ್‌ನಲ್ಲಿ ನಡೆದ ಟ್ರಕ್ ದಾಳಿಗೂ, ನೆವಡಾದ ಲಾಸ್ ವೇಗಾಸ್‌ನಲ್ಲಿರುವ ಟ್ರಂಪ್ ಹೋಟೆಲ್ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ನ್ಯೂ ಅರ್ಲಿನ್ಸ್‌ನಲ್ಲಿ ಬುಧವಾರ ಮುಂಜಾನೆ 3ರ ಹೊತ್ತಿಗೆ ಜನಸಂದಣಿ ಮೇಲೆ ಟ್ರಕ್ ಹರಿದ ಪರಿಣಾಮ 15 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೆವಡಾ ರಾಜ್ಯದಲ್ಲಿ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟದಿಂದಾಗಿ ಒಬ್ಬ ಮೃತಪಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.
ನ್ಯೂ ಅರ್ಲಿನ್ಸ್ ದಾಳಿಯ ಶಂಕಿತ ಹಾಗೂ ಸ್ಫೋಟಗೊಂಡ ಟೆಸ್ಲಾ ಸೈಬರ್‌ಟ್ರಕ್ ಚಾಲಕ, ಇಬ್ಬರೂ ವಾಹನಗಳನ್ನು Turo ಆ್ಯಪ್ ಮೂಲಕ ಬಾಡಿಗೆ ಪಡೆದಿದ್ದರು ಎಂಬುದನ್ನು ಬಿಟ್ಟರೆ, ಬೇರೆ ಸಂಬಂಧ ಹೊಂದಿದ್ದಾರೆಯೇ ಎಂಬ ಬಗ್ಗೆ ಸ್ಥಳೀಯ ಹಾಗೂ ಫೆಡರಲ್ ಕಾನೂನುಜಾರಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ನ್ಯೂ ಅರ್ಲಿನ್ಸ್‌ನಲ್ಲಿ ದಾಳಿ ನಡೆಸಿದ ಶಂಕಿತ, ಟೆಕ್ಸಾಸ್‌ನ ಶಂಸುದ್ದೀನ್ ಜಬ್ಬಾರ್ ಎಂಬಾತ ಅಮೆರಿಕ ಸೇನೆಯಲ್ಲಿ 13 ವರ್ಷ ಕೆಲಸ ಮಾಡಿದ್ದ ಎಂಬುದು ತಿಳಿದುಬಂದಿದೆ. ಟ್ರಕ್‌ನಲ್ಲಿ ಐಎಸ್ ಸಂಘಟನೆಯ ಧ್ವಜ, ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ಸಾಧನಗಳು ಪತ್ತೆಯಾಗಿವೆ. ಹೀಗಾಗಿ, ಈ ದಾಳಿಯು ಭಯೋತ್ಪಾದನಾ ಸಂಚು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೃತ್ಯಗಳಿಗೆ ಸಂಬಂಧಿಸಿದಂತೆ ಕ್ಯಾಂಪ್ ಡೇವಿಡ್‌ನಲ್ಲಿ ಹೇಳಿಕೆ ನೀಡಿರುವ ಬೈಡನ್, 'ಲಾಸ್ ವೇಗಾಸ್ ಸ್ಫೋಟದ ತನಿಖೆ ನಡೆಸುತ್ತಿರುವ ಗುಪ್ತಚರ ದಳ ಹಾಗೂ ಕಾನೂನು ಜಾರಿ ಅಧಿಕಾರಿಗಳು, ನ್ಯೂ ಅರ್ಲಿನ್ಸ್ ದಾಳಿಯೊಂದಿಗೆ ನಂಟು ಇದೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ' ಎಂದಿದ್ದಾರೆ.
'ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮತ್ತು ಅಮೆರಿಕನ್ನರಿಗೆ ಯಾವುದೇ ಬೆದರಿಕೆ ಇಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ನಿರ್ದೇಶಿಸಿದ್ದೇನೆ' ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.