
ನ್ಯೂಯಾರ್ಕ್: ಚಿತ್ರ ನಿರ್ದೇಶಕಿಯೂ ಆಗಿರುವ ಭಾರತ ಮೂಲದ ಮೀರಾ ನಾಯರ್ ಅವರು ಅಮೆರಿಕದ ನ್ಯೂಯಾರ್ಕ್‌ನ ಮೇಯರ್ ಆಗಿರುವ ತಮ್ಮ ಪುತ್ರ ಜೊಹ್ರಾನ್ ಮಮ್ದಾನಿ ಅವರ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಮಾನ್ಸೂನ್ ವೆಡ್ಡಿಂಗ್’ ಹಾಗೂ ‘ಸಲಾಮ್ ಬಾಂಬೇ’ಯಂಥ ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಮೀರಾ ನಾಯರ್ ಹಾಗೂ ಅಮೆರಿಕದ ಮೂಲದ ಮಹಮೂದ್ ಮಮ್ದಾನಿ ಅವರ ಪುತ್ರ ಜೊಹ್ರಾನ್ ಅವರು ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೀರಾ ಅವರು ಇನ್‌ಸ್ಟಾಗ್ರಾಂ ಮೂಲಕ ಪುತ್ರನನ್ನು ಅಭಿನಂದಿಸಿ, ಸಂಭ್ರಮಿಸಿದ್ದಾರೆ. ‘ಜೊಹ್ರಾನ್, ನೀನು ಸುಂದರ’ ಎಂಬ ಒಕ್ಕಣೆಯ ಪೋಸ್ಟ್ ಹಂಚಿಕೊಂಡಿರುವ ಅವರು ಜೇ–ಝೀ ಅವರ ‘ಎಂಪೈರ್ ಸ್ಟೇಟ್ ಆಫ್ ಮೈಂಡ್’ ಗೀತೆಯನ್ನು ಅರ್ಪಿಸಿದ್ದಾರೆ.
ಜೊಹ್ರಾನ್ ಮಮ್ದಾನಿ ಗೆಲುವಿಗೆ ಮೀರಾ ನಾಯರ್ ಅವರ ಪೋಸ್ಟ್
ಭಾರತೀಯ ಮೂಲದ ಮೀರಾ ನಾಯರ್ ಅವರು ಜನಿಸಿದ್ದು ಒಡಿಶಾದ ರೂರ್ಕೆಲಾದಲ್ಲಿ. ತಂದೆ ಐಎಎಸ್ ಅಧಿಕಾರಿ ಅಮೃತ್ ಲಾಲ್ ನಾಯರ್. ತಾಯಿ ಪ್ರವೀಣ್ ನಾಯರ್ ಅವರು ಸಾಮಾಜಿಕ ಕಾರ್ಯಕರ್ತೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವಾಗಲೇ ನಾಟಕದಲ್ಲಿ ಆಸಕ್ತಿ ಬೆಳೆಸಿಕೊಂಡ ಮೀರಾ ಅವರು ತಮ್ಮದೇ ನಾಟಕ ತಂಡವನ್ನೂ ಕಟ್ಟಿಕೊಂಡವರು.
ನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ನ ಕೇಂಬ್ರಿಜ್ ಹಾಗೂ ನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಮೀರಾ, ಬಂಗಾಳಿ ರಂಗಭೂಮಿ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ ಪಡೆದರು. ನಂತರ ಸೊ ಫಾರ್ ಫ್ರಂ ಇಂಡಿಯಾ, ಇಂಡಿಯನ್ ಕ್ಯಾಬರೆ ಸೇರಿದಂತೆ ಕೆಲ ಸಾಕ್ಷ್ಯಚಿತ್ರಗಳನ್ನು ಅವರು ನಿರ್ದೇಶಿಸಿದರು. ಪದ್ಮಭೂಷಣ, ಗೋಲ್ಡನ್ ಲಯನ್ ಪ್ರಶಸ್ತಿಗಳು ಅವರಿಗೆ ಸಂದಿವೆ.
ಛಾಯಾಗ್ರಾಹಕ ಮಿಚ್ ಎಪ್‌ಸ್ಟೀನ್ ಅವರನ್ನು ವರಿಸಿದ್ದ ಮೀರಾ ನಂತರ ಅವರಿಂದ ಪ್ರತ್ಯೇಕಗೊಂಡರು. ‘ಮಿಸ್ಸಿಸಿಪಿ ಮಸಾಲಾ’ ಎಂಬ ಚಿತ್ರದ ತಯಾರಿಕೆಗೆ ಉಂಗಾಡಕ್ಕೆ ತೆರಳಿದ್ದ ಮೀರಾ, ಅಲ್ಲಿನ ರಾಜಕಾರಣಿ ಮಹಮೂದ್ ಮಮ್ದಾನಿ ಅವರನ್ನು ವಿವಾಹವಾದರು. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಈ ದಂಪತಿಯ ಪುತ್ರನೇ ನ್ಯೂಯಾರ್ಕ್‌ನ ನೂತನ ಮೇಯರ್ ಜೊಹ್ರಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.