ADVERTISEMENT

ನಾಮನಿರ್ದೇಶನ ಸ್ಪರ್ಧೆ: ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಟ್ರಂಪ್‌ ಸೋಲಿಸಿದ ನಿಕ್ಕಿ

ಪಿಟಿಐ
Published 4 ಮಾರ್ಚ್ 2024, 13:21 IST
Last Updated 4 ಮಾರ್ಚ್ 2024, 13:21 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂಗವಾಗಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಭಾರತ ಮೂಲದ ಅಮೆರಿಕನ್‌ ಅಭ್ಯರ್ಥಿ ನಿಕ್ಕಿ ಹ್ಯಾಲೆ ಜಯಗಳಿಸಿದರು.

ಹ್ಯಾಲೆ 1,274 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ ಅವರನ್ನು ಸೋಲಿಸಿದರು.

ಮಾಜಿ ಅಧ್ಯಕ್ಷ ಟ್ರಂಪ್‌ 676 ಮತಗಳನ್ನು ಪಡೆದಿದ್ದಾರೆ. ವಾಷಿಂಗ್ಟನ್‌ ಡಿ.ಸಿಯ ರಿಪಬ್ಲಿಕನ್‌ ಪಕ್ಷದ ಎಲ್ಲಾ 19 ಪ್ರತಿನಿಧಿಗಳ ಮತಗಳು ಹ್ಯಾಲೆ ಅವರಿಗೆ ಲಭಿಸಲಿವೆ ಎಂದು ಮೂಲಗಳು ಹೇಳಿವೆ.

ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಪ್ರಾಥಮಿಕ ಹಂತದಲ್ಲಿ ಜಯಗಳಿಸಿರುವ ಮೊದಲ ಮಹಿಳೆ ಎಂಬ ಹಿರಿಮೆಗೂ ಹ್ಯಾಲಿ ಪಾತ್ರರಾಗಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಅಭ್ಯರ್ಥಿಗಳಾಗಿದ್ದ ಬಾಬ್ಬಿ ಜಿಂದಾಲ್‌ (2016), ಕಮಲಾ ಹ್ಯಾರಿಸ್‌ (2020) ಮತ್ತು ವಿವೇಕ್‌ ರಾಮಸ್ವಾಮಿ (2024) ಅವರು ಮೊದಲ ಹಂತದಲ್ಲೇ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ಹ್ಯಾಲೆ ತಮ್ಮ ತವರು ರಾಜ್ಯವಾದ ಸೌತ್‌ ಕೆರೋಲಿನಾದಲ್ಲಿ ಸೋತಿದ್ದರು.

‘ನಿಕ್ಕಿ ಅವರನ್ನು ಅಮೆರಿಕದ ಇತರ ಪ್ರದೇಶಗಳಲ್ಲಿ ಮತದಾರರು ತಿರಸ್ಕರಿಸಿದ್ದಾರೆ. ವಾಷಿಂಗ್ಟನ್‌ ಡಿ.ಸಿ.ಯ ಫಲಿತಾಂಶ ಮಾತ್ರ ಅವರ ಕೈ ಹಿಡಿದಿದೆ’ ಎಂದು ಟ್ರಂಪ್‌ ಅವರ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದರು.

‘ಟ್ರಂಪ್‌ ಅವರು ಅಮೆರಿಕದ ಪ್ರತಿಯೊಬ್ಬರಿಗಾಗಿಯೂ ಹೋರಾಟ ನಡೆಸಲಿದ್ದಾರೆ’ ಎಂದೂ ಹೇಳಿದರು. ಈ ಹಿಂದೆ ನಡೆದಿದ್ದ ನಾಮನಿರ್ದೇಶನ ಸ್ಪರ್ಧೆಗಳಲ್ಲಿ ಟ್ರಂಪ್‌ ಅವರು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.