ADVERTISEMENT

₹ 19 ಕೋಟಿ ವಂಚನೆ: ನೀರವ್‌ ಸಹೋದರ ನೇಹಲ್‌ ಮೋದಿ ವಿರುದ್ಧ ಆರೋಪ

ಪಿಟಿಐ
Published 20 ಡಿಸೆಂಬರ್ 2020, 7:35 IST
Last Updated 20 ಡಿಸೆಂಬರ್ 2020, 7:35 IST
ನೇಹಲ್‌ ಮೋದಿ
ನೇಹಲ್‌ ಮೋದಿ   

ನ್ಯೂಯಾರ್ಕ್‌: ಮ್ಯಾನ್‌ಹಟನ್‌ನಲ್ಲಿನ ಕಂಪನಿಗೆ ವಂಚಿಸಿ, ₹ 19 ಕೋಟಿ (2.6 ದಶಲಕ್ಷ ಡಾಲರ್‌) ಮೌಲ್ಯದ ವಜ್ರ ಪಡೆದಿದ್ದಾರೆ ಎಂದು ನೇಹಲ್‌ ಮೋದಿ ವಿರುದ್ಧ ಆರೋಪಿಸಲಾಗಿದೆ.

41 ವರ್ಷದ ನೇಹಲ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್‌ ಮೋದಿ ತಮ್ಮ.

ನೇಹಲ್‌ ವಿರುದ್ಧ ಇಲ್ಲಿನ ಸುಪ್ರೀಂಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮ್ಯಾನ್‌ಹಟ್ಟನ್‌ ಜಿಲ್ಲಾ ಅಟಾರ್ನಿ ವ್ಯಾನ್ಸ್‌ ಜೂನಿಯರ್ ಹೇಳಿದ್ದಾರೆ.

ADVERTISEMENT

‘ನೋಬಲ್‌ ಟೈಟಾನ್ ಹೋಲ್ಡಿಂಗ್ಸ್‌ ನ ಸದಸ್ಯರಾಗಿದ್ದ ನೇಹಲ್‌, 2015ರ ಮಾರ್ಚ್‌ನಿಂದ ಆಗಸ್ಟ್‌ ವರೆಗಿನ ಅವಧಿಯಲ್ಲಿ ಎಲ್‌ಎಲ್‌ಡಿ ಡೈಮಂಡ್ಸ್‌ ಎಂಬ ಕಂಪನಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ₹ 19 ಕೋಟಿ ಮೌಲ್ಯದ ವಜ್ರಗಳನ್ನು ಪಡೆದಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಇದೊಂದು ವ್ಯವಹಾರಕ್ಕೆ ಸಂಬಂಧಿಸಿದ ವಿವಾದ. ಈ ವಿಷಯದಲ್ಲಿ ನೇಹಲ್‌ ತಪ್ಪಿತಸ್ಥನಲ್ಲ’ ಎಂದು ನೇಹಲ್ ಪರ ವಕೀಲ ರೋಜರ್‌ ಬರ್ನ್‌ಸ್ಟೀನ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.