ADVERTISEMENT

ಇಸ್ರೇಲ್‌ ಸಂಸತ್‌ ಚುನಾವಣೆ: ಮತ್ತೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ: ಮತದಾನೋತ್ತರ ಸಮೀಕ್ಷೆ

ಏಜೆನ್ಸೀಸ್
Published 24 ಮಾರ್ಚ್ 2021, 8:24 IST
Last Updated 24 ಮಾರ್ಚ್ 2021, 8:24 IST
ಪತ್ನಿ ಸಾರಾ ಜತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು   ಎಎಫ್‌ಪಿ ಚಿತ್ರ
ಪತ್ನಿ ಸಾರಾ ಜತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು   ಎಎಫ್‌ಪಿ ಚಿತ್ರ   

ಜೆರುಸಲೇಂ: ಇಸ್ರೇಲ್‌ ಸಂಸತ್‌ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯುವ ಸಾಧ್ಯತೆಗಳಿಲ್ಲ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ, ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿ ಇಸ್ರೇಲ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ನಾಯಕತ್ವಕ್ಕೆ ಜನಮತಗಣನೆ ಎಂದೇ ಈ ಚುನಾವಣೆಯನ್ನು ಪರಿಗಣಿಸಲಾಗಿತ್ತು. ಈ ಬಾರಿ ಚುನಾವಣೆ ನಿರ್ಣಾಯಕವಾಗಲಿದ್ದು, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಬಹುದು ಎಂದು ನೆತನ್ಯಾಹು ನಿರೀಕ್ಷಿಸಿದ್ದರು. ಆದರೆ, ಸಣ್ಣ ಪಕ್ಷಗಳೇ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು ಗೊತ್ತಾಗಿದೆ. ಬಲಪಂಥೀಯ ಪಕ್ಷಗಳ ಬಗ್ಗೆಯೂ ಮತದಾರರು ಒಲವು ತೋರಿದ್ದಾರೆ.

ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಬುಧವಾರ ಮಾತನಾಡಿರುವ ನೆತನ್ಯಾಹು, ’ಚುನಾವಣೆಯಲ್ಲಿ ನಾವು ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದೇವೆ’ ಎಂದು ಪ್ರತಿಪಾದಿಸಿದರು. ಆದರೆ, ‘ಜಯಗಳಿಸಿದ್ದೇವೆ’ ಎಂದು ಘೋಷಿಸಿಕೊಳ್ಳಲಿಲ್ಲ. ಬದಲಾಗಿ, ವಿರೋಧ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಸ್ಥಿರ ಸರ್ಕಾರ ರಚಿಸುವ ಸುಳಿವು ನೀಡಿದರು. ಈ ಮೂಲಕ ಮತ್ತೊಂದು ಚುನಾವಣೆ ತಪ್ಪಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಯಾವುದೇ ಸಂದರ್ಭದಲ್ಲಿ ಇಸ್ರೇಲ್‌ನಲ್ಲಿ ಐದನೇ ಬಾರಿ ಚುನಾವಣೆ ನಡೆಸಲು ಅವಕಾಶ ನೀಡಬಾರದು. ನಾವೀಗ ಸ್ಥಿರ ಸರ್ಕಾರ ರಚಿಸಬೇಕಾಗಿದೆ’ ಎಂದು ಬೆಂಜಮಿನ್‌ ನೆತನ್ಯಾಹು ಹೇಳಿದರು.

ಬುಧವಾರ ಬೆಳಗಿನ ಜಾವದ ವೇಳೆ ಶೇಕಡ 64ರಷ್ಟು ಮತಗಳ ಎಣಿಕೆ ಪೂರ್ಣಗೊಂಡಿತ್ತು.

ಹಿಂದಿನ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ನಿಖರವಾಗಿರಲಿಲ್ಲ. ಹೀಗಾಗಿ, ಚುನಾವಣೆಯ ಅಂತಿಮ ಫಲಿತಾಂಶದ ಬಗ್ಗೆ ಇಸ್ರೇಲ್‌ ಜನತೆ ಹೆಚ್ಚು ಕಾತುರದಿಂದ ಕಾಯುತ್ತಿದ್ದಾರೆ.

‘ಒಟ್ಟು ಮೂರು ಆಯ್ಕೆಗಳಿವೆ. ನೆತನ್ಯಾಹು ನೇತೃತ್ವದ ಸರ್ಕಾರ, ಮೈತ್ರಿಕೂಟದಲ್ಲಿ ಬದಲಾವಣೆ ಮಾಡಿ ನೆತನ್ಯಾಹು ಅವರಿಗೆ ವಿರೋಧ ಪಕ್ಷದ ಸ್ಥಾನ ನೀಡುವುದು ಮತ್ತು ಮಧ್ಯಂತರ ಸರ್ಕಾರ ರಚಿಸಿ ಐದನೇ ಬಾರಿ ಚುನಾವಣೆ ನಡೆಸುವುದು’ ಎಂದು ಇಸ್ರೇಲ್‌ ಡೆಮಾಕ್ರಸಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಯೊಹಾನನ್‌ ಪ್ಲೆಸ್ನೆರ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.