ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನೊಬೆಲ್ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ
ಕರಾಕಸ್: ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರವು ವೆನೆಜುವೆಲಾದ ವಿರೋಧಪಕ್ಷದ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಲಭಿಸಿದೆ.
ತಮ್ಮ ಹೆಸರು ಘೋಷಣೆಯಾದ ಕೆಲಹೊತ್ತಿನ ಬಳಿಕ ಟ್ವಿಟರ್/ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮಚಾದೊ, ಈ ಗೌರವವು 'ವೆನೆಜುವೆಲಾದ ಎಲ್ಲರ ಹೋರಾಟಗಾರರಿಗೆ' ಸಲ್ಲುತ್ತದೆ ಎಂದಿದ್ದಾರೆ. ಹಾಗೆಯೇ, ವೆನೆಜುವೆಲಾ ಹೋರಾಟ ಬೆಂಬಲಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.
'ವೆನೆಜುವೆಲಾದ ಎಲ್ಲರ ಹೋರಾಟವನ್ನು ಗುರುತಿಸುವ ಈ ಕ್ರಮವು, ಸ್ವಾತಂತ್ರ್ಯ ಪಡೆಯುವ ಕಾರ್ಯವನ್ನು ನಾವು ಪೂರ್ಣಗೊಳಿಸಲು ಉತ್ತೇಜನೆ ನೀಡುತ್ತದೆ' ಎಂದಿದ್ದಾರೆ.
ಮುಂದುವರಿದು, 'ನಾವು ವಿಜಯದ ಹೊಸ್ತಿಲಲ್ಲಿದ್ದೇವೆ. ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಸಾಧಿಸುವ ನಿಟ್ಟಿನಲ್ಲಿ ಅಧ್ಯಕ್ಷ ಟ್ರಂಪ್, ಅಮೆರಿಕನ್ನರು, ಲ್ಯಾಟಿನ್ ಅಮೆರಿಕನ್ನರು ಹಾಗೂ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ನಮ್ಮ ಪ್ರಮುಖ ಮಿತ್ರರು ಎಂದು ಇಂದು ಹಾಗೂ ಎಂದೆಂದಿಗೂ ನಂಬುತ್ತೇವೆ' ಎಂದು ತಿಳಿಸಿದ್ದಾರೆ.
ಹಾಗೆಯೇ, 'ಈ ಪುರಸ್ಕಾರವನ್ನು ವೆನೆಜುವೆಲಾದ ಸಂತ್ರಸ್ತರು ಹಾಗೂ ನಮ್ಮ ಉದ್ದೇಶ ಈಡೇರಿಕೆಗೆ ನಿರ್ಣಾಯಕ ಬೆಂಬಲ ನೀಡುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೆ ಅರ್ಪಿಸುತ್ತೇನೆ' ಎಂದೂ ಬರೆದುಕೊಂಡಿದ್ದಾರೆ.
ಪ್ರಶಸ್ತಿಯು ಚಿನ್ನದ ಪದಕ, ಪ್ರಶಸ್ತಿಪತ್ರ ಹಾಗೂ 1.2 ಮಿಲಿಯನ್ ಡಾಲರ್ (ಅಂದಾಜು ₹10 ಕೋಟಿ) ಒಳಗೊಂಡಿದ್ದು, ಓಸ್ಲೊದಲ್ಲಿ ಡಿಸೆಂಬರ್ 10ರಂದು ಪ್ರದಾನ ಮಾಡಲಾಗುತ್ತದೆ.
ಮಾರಿಯಾ ಯಾರು?
ವೆನೆಜುವೆಲಾದ ಕರಾಕಸ್‌ನಲ್ಲಿ 1967 ಅಕ್ಟೋಬರ್ 7ರಂದು ಜನಿಸಿದ ಮಾರಿಯಾ, ರಾಜಕಾರಣಿಯಾಗುವ ಮೊದಲು ಕೈಗಾರಿಕಾ ಎಂಜಿನಿಯರ್ ಆಗಿದ್ದರು.
2023ರಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ವೆನೆಜುವೆಲಾ ಅಧ್ಯಕ್ಷ ಸ್ಥಾನಕ್ಕೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಕಾರಣಾಂತರಗಳಿಂದಾಗಿ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು.
ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮಾರಿಯಾ ಅವರು ಹಲವು ಬಾರಿ ತಲೆಮರೆಸಿಕೊಳ್ಳಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿತ್ತು. ದೇಶದ ಹಾಲಿ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಕೆಲ ಕಾಲ ಅವರು ಸೆರೆವಾಸ ಅನುಭವಿಸಬೇಕಾಯಿತು.
ಕಳೆದ ವರ್ಷ ಮಾರಿಯಾ ಅವರು ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಸಂಘಟನೆ ನೀಡುವ ‘ಸಖರೋವ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಕೌನ್ಸಿಲ್ ಆಫ್ ಯುರೋಪ್ ನೀಡುವ ‘ವಕ್ಲಾವ್ ಹ್ಯಾವೆಲ್’ ಪ್ರಶಸ್ತಿಯೂ ಅವರಿಗೆ ಸಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.