ಕೆನಡಾದ ಮಿಸ್ಸಿಸೌಗಾ ನಗರದಲ್ಲಿ ಶ್ರೀರಾಮನ ಪ್ರತಿಮೆಯನ್ನು
X /@BradWButt
ಮಿಸ್ಸಿಸೌಗಾ (ಕೆನಡಾ): ಕೆನಡಾದ ಮಿಸ್ಸಿಸೌಗಾ ನಗರದಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಭಾನುವಾರ ಪ್ರತಿಷ್ಠಾಪಿಸಲಾಗಿದೆ. ಇದು, ನಗರದ ಹಿಂದೂ ಪಾರಂಪರಿಕ ಕೇಂದ್ರದಲ್ಲಿದ್ದು, ಉತ್ತರ ಅಮೆರಿಕ ಖಂಡದಲ್ಲಿ ಪ್ರತಿಷ್ಠಾಪಿಸಲಾದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಎನ್ನಲಾಗಿದೆ.
ಪ್ರತಿಮೆಯ ಭಾಗಗಳನ್ನು ದೆಹಲಿಯಲ್ಲಿ ರೂಪಿಸಿ, ಕೆನಡಾದಲ್ಲಿ ಜೋಡಿಸಲಾಗಿದೆ. ನೂರಾರು ವರ್ಷಗಳವರೆಗೆ ಯಾವುದೇ ಹಾನಿಯಾಗದಂತೆ ಉಕ್ಕಿನ ಚೌಕಟ್ಟನ್ನು ಹಾಕಲಾಗಿದ್ದು, ಗಂಟೆಗೆ ಸುಮಾರು 200 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳುವಷ್ಟು ಗುಣಮಟ್ಟದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಮೂರ್ತಿ ಸ್ಥಾಪನೆಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರವೇ ಸ್ಫೂರ್ತಿ ಎನ್ನಲಾಗಿದೆ.
ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಭಾರತ ಮೂಲದ ಕೆನಡಾ ಉದ್ಯಮಿಯೊಬ್ಬರು ಹಣಕಾಸಿನ ನೆರವು ನೀಡಿದ ಬಳಿಕ ಯೋಜನೆ ಆರಂಭವಾಗಿತ್ತು. ಟೊರೊಂಟೊ ಪಿಯರ್ಸನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವಿಮಾನಗಳಿಂದಲೇ ಪ್ರಯಾಣಿಕರು ಈ ಮೂರ್ತಿಯನ್ನು ವೀಕ್ಷಿಸಲು ಸಾಧ್ಯವಾಗುವಂತೆ ಆಯಕಟ್ಟಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
'ಮೂರ್ತಿ ಪ್ರತಿಷ್ಠಾಪನೆಯು ಹೆಮ್ಮೆಯ ಸಂಗತಿ ಎಂಬುದಷ್ಟೇ ಅಲ್ಲದೆ, ಸದಾಚಾರವು ನಮ್ಮ ಬದುಕಿಗೆ ಯಾವಾಗಲೂ ಮಾರ್ಗದರ್ಶನ ಮಾಡುತ್ತದೆ ಎಂಬುದುನ್ನು ಇದು ನಿರಂತರವಾಗಿ ನೆನಪಿಸುತ್ತದೆ' ಎಂದು ಆಚಾರ್ಯ ಸುರಿಂದರ್ ಶರ್ಮ ಶಾಸ್ತ್ರಿ ಎಂಬವರು ಪ್ರತಿಪಾದಿಸಿದ್ದಾರೆ. ಹಾಗೆಯೇ, 'ಈ ಮೂರ್ತಿಯು ಆಧ್ಯಾತ್ಮಿಕ ಸಮುದಾಯಕ್ಕೆ ನೀಡಿದ ಉಡುಗೊರೆ' ಎಂದು ಬಣ್ಣಿಸಿದ್ದಾರೆ.
ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಧಾನ ಸಂಘಟಕ ಕುಶಾಗ್ರ ಶರ್ಮಾ ಎಂಬವರು, '51 ಅಡಿ ಎತ್ತರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸುಮಾರು 10,000 ಭಕ್ತರು ಪಾಲ್ಗೊಂಡಿದ್ದರು. ಇದು ನಿಜವಾಗಿಯೂ ಅದ್ಭುತವಾದದ್ದು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.