ADVERTISEMENT

ತನ್ನದೇ ಜನರ ಹಕ್ಕು ಕಸಿಯಲು ಕೊರೊನಾವನ್ನು ಬಳಸಿಕೊಂಡ ಉ.ಕೊರಿಯಾ: 8 ದೇಶಗಳ ಆರೋಪ

ಏಜೆನ್ಸೀಸ್
Published 12 ಡಿಸೆಂಬರ್ 2020, 13:46 IST
Last Updated 12 ಡಿಸೆಂಬರ್ 2020, 13:46 IST
ಉತ್ತರ ಕೊರಿಯಾ ಪ್ರಜೆಗಳು
ಉತ್ತರ ಕೊರಿಯಾ ಪ್ರಜೆಗಳು   

ನ್ಯೂಯಾರ್ಕ್‌: ತನ್ನದೇ ಜನರ ಹಕ್ಕುಗಳನ್ನು ಹತ್ತಿಕ್ಕಲು ಉತ್ತರ ಕೊರಿಯಾ ಸರ್ಕಾರವು ಕೊರೊನಾ ಸಾಂಕ್ರಾಮಿಕವನ್ನು ಬಳಸಿಕೊಳ್ಳುತ್ತಿದೆ ಎಂದು ಎಂಟು ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸಿವೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಸರ್ಕಾರವು ವಿಧಿಸಿದ ಮರಣದಂಡನೆಯಂತಹ ಕಠಿಣ ಕ್ರಮಗಳು ಮತ್ತು ಜನರ ಚಲನವಲನಗಳ ಮೇಲೆ ಹೇರಿದ ನಿಯಂತ್ರಣಗಳ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

ಉತ್ತರ ಕೊರಿಯಾದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗುಪ್ತ ಸಭೆಯಲ್ಲಿ ಈ ಹಿಂದೆ ಚರ್ಚಿಸಲಾಗಿತ್ತು. ಈ ವಿಚಾರವಾಗಿ ಚರ್ಚಿಸಲು ಮುಕ್ತ ಸಭೆಯನ್ನು ಕರೆಯುವಂತೆ ಜರ್ಮನಿಯು ವಿಶ್ವಸಂಸ್ಥೆಯನ್ನು ಒತ್ತಾಯಿಸಿತ್ತು. ಆದರೆ, ಉತ್ತರ ಕೊರಿಯಾದ ನೆರೆಯ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ದೇಶಗಳು ಜರ್ಮನಿಯ ಒತ್ತಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. 15 ಸದಸ್ಯರ ಪರಿಷತ್ತಿನ ಮುಕ್ತ ಸಭೆಗೆ ಬೇಕಾದ ಒಂಬತ್ತು ಮತಗಳನ್ನು ಜರ್ಮನಿಯು ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂದು ರಾಜತಾಂತ್ರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಜರ್ಮನಿ, ಬೆಲ್ಜಿಯಂ, ಡೊಮಿನಿಕನ್ ರಿಪಬ್ಲಿಕ್, ಎಸ್ಟೋನಿಯಾ, ಫ್ರಾನ್ಸ್, ಇಂಗ್ಲೆಂಡ್‌ ಮತ್ತು ಅಮೆರಿಕಾಗಳು ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಆರೋಪಿಸಿರುವ ಎಂಟು ರಾಷ್ಟ್ರಗಳಾಗಿವೆ.

ಉತ್ತರ ಕೊರಿಯಾ ಸರ್ಕಾರವು ತನ್ನ ಜನರ ಮೇಲೆ ಪರಮಾಣು ಮತ್ತು ಮಿಲಿಟರಿ ಶಕ್ತಿಯನ್ನು ಬಳಸುತ್ತಿದೆ ಎಂದು ಈ ಎಂಟು ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.