ADVERTISEMENT

ಫೈಜರ್ ಕೋವಿಡ್‌–19 ಲಸಿಕೆ ತಂತ್ರಜ್ಞಾನ ಕಳವಿಗೆ ಉತ್ತರ ಕೊರಿಯಾ ಯತ್ನ

ರಾಯಿಟರ್ಸ್
Published 16 ಫೆಬ್ರುವರಿ 2021, 10:27 IST
Last Updated 16 ಫೆಬ್ರುವರಿ 2021, 10:27 IST
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್ ಸಂಗ್ರಹ)
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್ ಸಂಗ್ರಹ)   

ಸೋಲ್: ‘ಫೈಜರ್ ಇಂಕ್’ ಅನ್ನು ಹ್ಯಾಕ್ ಮಾಡುವ ಮೂಲಕ ಫೈಜರ್ ಕೋವಿಡ್–19 ಲಸಿಕೆಯ ತಂತ್ರಜ್ಞಾನವನ್ನು ಕಳವು ಮಾಡಲು ಉತ್ತರ ಕೊರಿಯಾ ಯತ್ನಿಸಿದೆ ಎಂದು ದಕ್ಷಿಣ ಕೊರಿಯಾದ ‘ಯೊನ್‌ಹ್ಯಾಪ್’ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಷ್ಟ್ರೀಯ ಗುಪ್ತಚರ ಸೇವಾ ದಳದ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ಹ್ಯಾಕ್ ಮಾಡುವ ಯತ್ನ ಯಾವಾಗ ನಡೆದಿದೆ, ಅದು ಯಶಸ್ವಿಯಾಗಿದೆಯೇ ಎಂಬುದನ್ನು ವರದಿ ಸ್ಪಷ್ಟಪಡಿಸಿಲ್ಲ. ಈ ವಿಚಾರವಾಗಿ ಏಷ್ಯಾ ಹಾಗೂ ದಕ್ಷಿಣ ಕೊರಿಯಾದಲ್ಲಿರುವ ಫೈಜರ್ ಕಚೇರಿಗಳು ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವರ್ಷ ಉತ್ತರ ಕೊರಿಯಾದ ಶಂಕಿತ ಹ್ಯಾಕರ್‌ಗಳು ಜಾನ್ಸನ್ ಆ್ಯಂಡ್ ಜಾನ್ಸನ್, ನೊವಾವ್ಯಾಕ್ಸ್ ಇಂಕ್, ಆಸ್ಟ್ರಾಜೆನೆಕಾ ಸೇರಿದಂತೆ 9 ಆರೋಗ್ಯ ಸಂಸ್ಥೆಗಳ ಮಾಹಿತಿ ಕಳವಿಗೆ ಯತ್ನಿಸಿದ್ದರು.

ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ದಕ್ಷಿಣ ಕೊರಿಯಾದ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಉತ್ತರ ಕೊರಿಯಾ ಯತ್ನಿಸಿದೆ. ಅವುಗಳನ್ನು ವಿಫಲಗೊಳಿಸಿದ್ದೇವೆ ಎಂದೂ ದಕ್ಷಿಣ ಕೊರಿಯಾ ಗುಪ್ತಚರ ದಳ ಹೇಳಿದೆ.

ದೇಶೀಯವಾಗಿ ಲಸಿಕೆ ಅಭಿವೃದ್ಧಿಪಡಿಸಲು ಬಳಸಿಕೊಳ್ಳುವ ಬದಲು ಕಳವು ಮಾಡಿದ ದತ್ತಾಂಶಗಳನ್ನು ಮಾರಾಟ ಮಾಡುವುದರಲ್ಲೇ ಹ್ಯಾಕರ್‌ಗಳಿಗೆ ಆಸಕ್ತಿ ಇದ್ದಂತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

‘ಕೊವಾಕ್ಸ್‌’ ಲಸಿಕೆ ಹಂಚಿಕೆ ಯೋಜನೆ ಅಡಿಯಲ್ಲಿ ಉತ್ತರ ಕೊರಿಯಾವು ಈ ವರ್ಷದ ಮೊದಲಾರ್ಧದಲ್ಲಿ 20 ಲಕ್ಷ ಡೋಸ್ ಆಸ್ಟ್ರಾಜೆನೆಕಾ ಲಸಿಕೆ ಪಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.