ADVERTISEMENT

ಉತ್ತರ ಕೊರಿಯಾದಿಂದ ಮಿಲಿಟರಿ ಶಕ್ತಿ ಪ್ರದರ್ಶನ

ಏಜೆನ್ಸೀಸ್
Published 15 ಜನವರಿ 2021, 6:07 IST
Last Updated 15 ಜನವರಿ 2021, 6:07 IST
ಉತ್ತರ ಕೊರಿಯಾದಿಂದ ಮಿಲಿಟರಿ ಶಕ್ತಿ ಪ್ರದರ್ಶನ ನಡೆಯಿತು –ಎಎಫ್‌ಪಿ ಚಿತ್ರ
ಉತ್ತರ ಕೊರಿಯಾದಿಂದ ಮಿಲಿಟರಿ ಶಕ್ತಿ ಪ್ರದರ್ಶನ ನಡೆಯಿತು –ಎಎಫ್‌ಪಿ ಚಿತ್ರ   

ಸೋಲ್‌: ದೇಶದ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ತನ್ನ ನಾಯಕ ಕಿಮ್‌ ಜಾಂಗ್‌ ಉನ್‌ ಘೋಷಿಸಿದ ಬೆನ್ನಲ್ಲೇ, ಉತ್ತರ ಕೊರಿಯಾ ಮಿಲಿಟರಿ ಶಕ್ತಿ ಪ್ರದರ್ಶಿಸಿದೆ.

ಜಲಾಂತರ್ಗಾಮಿಗಳಿಂದ ಚಿಮ್ಮಬಲ್ಲ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು, ಮಿಲಿಟರಿಯಲ್ಲಿ ಬಳಸುವ ಹಾರ್ಡ್‌ವೇರ್‌ ಅಭಿವೃದ್ಧಿಗೆ ಮುಂದಾಗುವುದಾಗಿ ಹೇಳಿರುವ ಉತ್ತರ ಕೊರಿಯಾ, ಇಲ್ಲಿ ನಡೆದ ಪರೇಡ್‌ನಲ್ಲಿ ತನ್ನ ಈ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿತು.

ಗುರುವಾರ ರಾತ್ರಿ ನಡೆದ ಪರೇಡ್‌ಅನ್ನು ಕಿಮ್‌ ಜಾಂಗ್‌ ಉನ್‌ ವೀಕ್ಷಿಸಿದರು. ‘ಏಷ್ಯಾದ ಶತ್ರು ರಾಷ್ಟ್ರಗಳಿಗೆ, ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ದೇಶದ ಮಿಲಿಟರಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು, ಅಣ್ವಸ್ತ್ರ ಕಾರ್ಯಕ್ರಮಕ್ಕೆ ಚುರುಕು ನೀಡಲಾಗುವುದು’ ಎಂದು ಕಿಮ್‌ ಹೇಳಿದರು.

ADVERTISEMENT

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ಈ ಹಿಂದೆ ‘ಕಿಮ್‌ ಜಾಂಗ್‌ ಉನ್‌ ಒಬ್ಬ ಕೊಲೆಗಡುಕ’ ಎಂದು ಟೀಕಿಸಿದ್ದರು. ಉತ್ತರ ಕೊರಿಯಾ ಮುಖಂಡನ ಜೊತೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದನ್ನು ಸಹ ಬೈಡನ್‌ ಕಟುವಾಗಿ ಟೀಕಿಸಿದ್ದರು.

ಈಗ, ಜ. 20ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಬೈಡನ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಬೈಡನ್‌ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಕಿಮ್‌ ಜಾಂಗ್‌ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.