ADVERTISEMENT

ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗ; ದಕ್ಷಿಣ ಕೊರಿಯಾಗೆ ಕಿಮ್‌ ಸೋದರಿಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 7:38 IST
Last Updated 5 ಏಪ್ರಿಲ್ 2022, 7:38 IST
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತು ಅವರ ಸೋದರಿ ಕಿಮ್‌ ಯೊ ಜಾಂಗ್‌
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತು ಅವರ ಸೋದರಿ ಕಿಮ್‌ ಯೊ ಜಾಂಗ್‌   

ಸೋಲ್‌: ದಕ್ಷಿಣ ಕೊರಿಯಾ ಆಕ್ರಮಣಕ್ಕೆ ಮುಂದಾದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ಸೋದರಿ ಕಿಮ್‌ ಯೊ ಜಾಂಗ್‌ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾ ಯುದ್ಧವನ್ನು ವಿರೋಧಿಸುತ್ತದೆ ಎಂದೂ ಹೇಳಿದ್ದಾರೆ.

ಆಡಳಿತಾರೂಢ ಪಕ್ಷ ಮತ್ತು ಉತ್ತರ ಕೊರಿಯಾ ಸರ್ಕಾರದಲ್ಲಿ ಕಿಮ್‌ ಯೊ ಜಾಂಗ್‌ ಪ್ರಮುಖ ಅಧಿಕಾರಿಯಾಗಿದ್ದಾರೆ. 'ದಕ್ಷಿಣ ಕೊರಿಯಾದ ರಕ್ಷಣಾ ಸಚಿವರು ಉತ್ತರ ಕೊರಿಯಾದ ಮೇಲೆ ಆಕ್ರಮಣ ನಡೆಸುವ ಬಗ್ಗೆ ಇತ್ತೀಚೆಗೆ ಚರ್ಚಿಸಿರುವ ಬಗ್ಗೆ ಪ್ರಸ್ತಾಪಿಸಿರುವ ಜಾಂಗ್‌ , ಅದೊಂದು 'ಬಹಳ ದೊಡ್ಡ ತಪ್ಪು' ನಿರ್ಧಾರ ಎಂದು ಹೇಳಿರುವುದಾಗಿ ಕೆಸಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದ ಸೇನಾ ಬಲದ ಕುರಿತು ಶುಕ್ರವಾರ ಮಾತನಾಡಿದ್ದ ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸುಹ್ ವುಕ್‌, 'ಉತ್ತರ ಕೊರಿಯಾದ ಯಾವುದೇ ಭಾಗದ ಗುರಿಯನ್ನು ನಿಖರವಾಗಿ ಮತ್ತು ಕ್ಷಿಪ್ರಗತಿಯಲ್ಲಿ ತಲುಪಬಹುದಾದ ಸಮರ್ಥ ಮತ್ತು ಅಭಿವೃದ್ಧಿ ಪಡಿಸಿದ ಹಲವು ಕ್ಷಿಪಣಿಗಳು ನಮ್ಮಲ್ಲಿವೆ' ಎಂದಿದ್ದರು.

ADVERTISEMENT

ಉತ್ತರ ಕೊರಿಯಾ ಶಕ್ತಿಯುತವಾದ ಕ್ಷಿಪಣಿ ಪರೀಕ್ಷೆಯನ್ನು ಈ ವರ್ಷ ನಡೆಸಿದೆ. ಅದರ ಬೆನ್ನಲ್ಲೇ ದಕ್ಷಿಣ ಕೊರಿಯಾ ತನ್ನ ಸೇನಾ ಬಲದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಉತ್ತರ ಕೊರಿಯಾ 2017ರ ಬಳಿಕ ಮತ್ತೆ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಸಜ್ಜಾಗುತ್ತಿರುವ ಬಗ್ಗೆ ಸೋಲ್‌ ಮತ್ತು ವಾಷಿಂಗ್ಟನ್‌ನ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊರಿಯಾ ಯಾವುದೇ ಅಪಾಯಕಾರಿ ಸೇನಾ ಕಾರ್ಯಾಚರಣೆಗೆ ಮುಂದಾದರೆ, ಸೋಲ್‌ನ ಪ್ರಮುಖ ಭಾಗಗಳು ಧ್ವಂಸವಾಗಬಹುದು ಎಂದು ಕಿಮ್‌ ಹಾಗೂ ಉತ್ತರ ಕೊರಿಯಾದ ಅಧಿಕಾರಿಗಳು ಭಾನುವಾರ ಪ್ರಕಟಣೆಯಲ್ಲಿ ಎಚ್ಚರಿಸಿದ್ದರು.

ಉತ್ತರ ಕೊರಿಯಾದ ಬೆದರಿಕೆಗಳ ಎದುರು ಸೂಕ್ತ ಸೇನಾ ಬಲವನ್ನು ಬಳಸಿಕೊಳ್ಳುವಂತೆ ದಕ್ಷಿಣ ಕೊರಿಯಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯೂನ್‌ ಸುಕ್‌–ಯೋಲ್‌ ಅವರು ಕರೆ ನೀಡಿದ್ದರು. ಯೂನ್‌ ಅವರನ್ನು ಗುರಿಯಾಗಿಸಿಕೊಂಡು ಕಿಮ್‌ ಟೀಕಾ ಪ್ರಹಾರ ನಡೆಸುತ್ತಿರುವುದಾಗಿ ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.