ADVERTISEMENT

ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಪ್ರಕರಣ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ಏಜೆನ್ಸೀಸ್
Published 13 ಮೇ 2022, 3:00 IST
Last Updated 13 ಮೇ 2022, 3:00 IST
ಕಿಮ್‌ ಜಾಂಗ್‌ ಉನ್‌
ಕಿಮ್‌ ಜಾಂಗ್‌ ಉನ್‌   

ಸೋಲ್‌: ಉತ್ತರ ಕೊರಿಯಾದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೋವಿಡ್–19 ಪ್ರಕರಣಗಳು ವರದಿಯಾಗಿದ್ದು, ಸೋಂಕು ಪ್ರಸರಣ ತಡೆಯಲು ಗುರುವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಇದೇ ಮೊದಲ ಬಾರಿಗೆ ಮಾಸ್ಕ್‌ ಧರಿಸಿ,ಟಿವಿಯಲ್ಲಿ ಕಾಣಿಸಿಕೊಂಡ ಅಧ್ಯಕ್ಷ ಕಿಮ್‌ ಜಾಂಗ್ ಉನ್‌, ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದರು. ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ಸೋಂಕು ಪ್ರಸರಣ ತಡೆಯಲ ‘ಗರಿಷ್ಠ ತುರ್ತು ನಿಯಂತ್ರಣ ಕ್ರಮಗಳನ್ನು’ ಜಾರಿಗೊಳಿಸಲಾಗುವುದು ಎಂದರು.

ರಾಷ್ಟ್ರದಲ್ಲಿ ಈ ವರೆಗೆ ಒಂದೇ ಒಂದು ಕೋವಿಡ್‌ ಪ್ರಕರಣ ವರದಿಯಾಗಿಲ್ಲ ಎಂದೇ ಉತ್ತರ ಕೊರಿಯಾ ಹೇಳುತ್ತಿತ್ತು. 2019ರಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದಲೂ ದೇಶದ ಎಲ್ಲ ಗಡಿಗಳಲ್ಲಿ ಕಠಿಣ ದಿಗ್ಬಂಧನ ವಿಧಿಸಲಾಗಿತ್ತು.

ADVERTISEMENT

ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿದ್ದ ರೋಗಿಯನ್ನು ಪರೀಕ್ಷೆ ಒಳಪಡಿಸಿದಾಗ, ವ್ಯಕ್ತಿಗೆ ರೂಪಾಂತರಿ ಓಮೈಕ್ರಾನ್‌ ಬಿಎ.2 ತಳಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಉತ್ತರ ಕೊರಿಯಾದ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ದೇಶದ 2.5 ಕೋಟಿ ಜನರು ಲಸಿಕೆ ಪಡೆಯದೇ ಇರುವ ಕಾರಣ ಕೋವಿಡ್‌ ಪ್ರಸರಣ ಎದುರಿಸಲು ಕಷ್ಟವಾಗಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಯುರೋಪ್‌: 20 ಲಕ್ಷ ಗಡಿದಾಟಿದ ಮೃತರ ಸಂಖ್ಯೆ’
ಜಿನೀವಾ/ಕೊಪೆನ್‌ಹೆಗನ್:
ಯುರೋಪ್‌ನಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಗುರುವಾರ 20 ಲಕ್ಷ ಗಡಿ ದಾಟಿತು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಅಮೆರಿಕದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಅಮೆರಿಕ ಹಾಗೂ ಆಫ್ರಿಕಾ ಹೊರತುಪಡಿಸಿ ಜಗತ್ತಿನ ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಕೆ ಕಂಡುಬರುತ್ತಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.