ಹೈಫಾ: ‘ಇಸ್ರೇಲ್‌ನ ಹೈಫಾ ನಗರವನ್ನು ಅಟೋಮನ್ ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ’ ಎಂದು ಹೈಫಾದ ಮೇಯರ್ ಯೋನಾ ಯಹಾವ್ ಹೇಳಿದ್ದಾರೆ.
ಹೈಫಾದ ವಿಮೋಚನೆಗಾಗಿ ಪ್ರಾಣತೆತ್ತ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಇದೇ ನಗರದಲ್ಲಿ ನಾನು ಹುಟ್ಟಿ ಬೆಳೆದಿದ್ದೇನೆ. ಅಟೋಮನ್ ಪಾರುಪತ್ಯದಿಂದ ಈ ನಗರವನ್ನು ಮುಕ್ತಗೊಳಿಸಿದ್ದು ಬ್ರಿಟಿಷರು ಎಂದೇ ನಮಗೆಲ್ಲಾ ಹೇಳಲಾಗಿತ್ತು. ಸಂಶೋಧಕರು ನಗರದ ಇತಿಹಾಸ ಕುರಿತು ಅಧ್ಯಯನ ನಡೆಸಿ, ಈ ನಗರವನ್ನು ಅಟೋಮನ್ ಆಳ್ವಿಕೆಯಿಂದ ಮುಕ್ತಗೊಳಿಸಿದವರು ಬ್ರಿಟಿಷರಲ್ಲ, ಭಾರತೀಯ ಸೈನಿಕರು ಎಂದು ಹೇಳುವವರೆಗೂ ತಪ್ಪಾದ ಇತಿಹಾಸ ನಂಬಿದ್ದೆವು’ ಎಂದು ಹೇಳಿದ್ದಾರೆ.
ಅಲ್ಲದೇ, ಈ ತಪ್ಪನ್ನು ಸರಿ ಪಡಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ತಪ್ಪಾದ ವಿಚಾರಗಳನ್ನು ತೆಗೆದು, ಸತ್ಯಾಂಶವನ್ನು ಅಳವಡಿಸಲಾಗುತ್ತಿದೆ’ ಎಂದೂ ಯಹಾವ್ ತಿಳಿಸಿದ್ದಾರೆ.
ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಆಟೋಮನ್ ಪಡೆಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆಯ ಅಶ್ವದಳ ಪಡೆ ಮಹತ್ತರ ಪಾತ್ರ ವಹಿಸಿದ ಕಾರಣ ಇಸ್ರೇಲ್‌ನ ಹಲವು ಕಡೆ ಭಾರತೀಯ ಸೈನಿಕರ ಸ್ಮಾರಕ ನಿರ್ಮಿಸಲಾಗಿದೆ.
ಹೈಫಾ ನಗರವನ್ನು ದಾಸ್ಯದಿಂದ ಮುಕ್ತಗೊಳಿಸಿದ ಮೈಸೂರು, ಹೈದರಾಬಾದ್ ಹಾಗೂ ಜೋಧಪುರದ ಅಶ್ವದಳಗಳ ಸ್ಮರಣಾರ್ಥ ಭಾರತೀಯ ಸೇನೆ ಕೂಡ ಪ್ರತಿವರ್ಷ ಸೆಪ್ಟೆಂಬರ್ 23ರಂದು ಗೌರವ ನಮನ ಸಲ್ಲಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.