ADVERTISEMENT

ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ: ಕೆನಡಾ ಸಂಸತ್‌ನಲ್ಲಿ ನಿರ್ಣಯ ಅಂಗೀಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2022, 3:51 IST
Last Updated 29 ಸೆಪ್ಟೆಂಬರ್ 2022, 3:51 IST
ಕೆನಡಾದ ಸಂಸತ್ತಿನಲ್ಲಿ ಸಂಸದ ಚಂದ್ರ ಆರ್ಯ ಮಾತನಾಡಿದರು
ಕೆನಡಾದ ಸಂಸತ್ತಿನಲ್ಲಿ ಸಂಸದ ಚಂದ್ರ ಆರ್ಯ ಮಾತನಾಡಿದರು   

ಟೊರೊಂಟೊ: ಪ್ರತಿ ವರ್ಷ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪಾರಂಪರಿಕಮಾಸ’ ಎಂದು ಆಚರಿಸುವ ನಿರ್ಣಯಕ್ಕೆ ಕೆನಡಾ ಸಂಸತ್‌ನಲ್ಲಿ ಅಂಗೀಕಾರ ದೊರೆತಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಸಂಜಾತ ಕೆನಡಾ ಸಂಸದ ಚಂದ್ರ ಆರ್ಯ, ‘ಪ್ರತಿ ವರ್ಷ ನವೆಂಬರ್ ತಿಂಗಳನ್ನು ‘ರಾಷ್ಟ್ರೀಯ ಹಿಂದೂ ಪಾರಂಪರಿಕಮಾಸ’ ಎಂದು ಘೋಷಿಸಬೇಕು ಎಂಬ ನನ್ನ ಖಾಸಗಿ ನಿರ್ಣಯವನ್ನು ಕೆನಡಾದ ಹೌಸ್ ಆಫ್ ಕಾಮನ್ಸ್ ಸರ್ವಾನುಮತದಿಂದ ಅಂಗೀಕರಿಸಿತು. ಇದು ಹಿಂದೂ ಪರಂಪರೆಯ ಮನುಕುಲಕ್ಕೆ ಮತ್ತು ನಮ್ಮ ದೇಶಕ್ಕೆ ಸಿಕ್ಕ ಮನ್ನಣೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

‘ಇದು ಕೆನಡಾದಲ್ಲಿ ತಮ್ಮ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಲು ಹಿಂದೂ-ಕೆನಡಿಯನ್ನರನ್ನು ಪ್ರೇರೇಪಿಸುತ್ತದೆ. ಜತೆಗೆ ಕೆನಡಾದ ರಾಜಕೀಯ, ಸಾಮಾಜಿಕ, ಆರ್ಥಿಕತೆ ಅಥವಾ ವ್ಯಾಪಾರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ನೆರವಾಗಲಿದೆ’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಚಂದ್ರ ಆರ್ಯ ಅವರು ಕೆನಡಾ ಸಂಸತ್‌ನಲ್ಲಿ ಕನ್ನಡದಲ್ಲಿ ಮಾಡಿದ ಭಾಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಮಾತೃಭಾಷೆ ಮೇಲಿನ ಅವರ ಪ್ರೀತಿಪ್ರಶಂಸೆಗೆ ಪಾತ್ರವಾಗಿತ್ತು.

‘ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಇದನ್ನು ಸುಮಾರು 5 ಕೋಟಿ ಜನರು ಮಾತನಾಡುತ್ತಾರೆ. ಬೇರೆ ದೇಶದ ಸಂಸತ್‌ನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು’ ಎಂದು ಚಂದ್ರ ಆರ್ಯ ಟ್ವೀಟ್‌ ಮಾಡಿದ್ದರು. ಜೊತೆಗೆ ಭಾಷಣದ ವಿಡಿಯೊವನ್ನೂ ಹಂಚಿಕೊಂಡಿದ್ದರು.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಕೆನಡಾದ ನೇಪಿಯನ್‌ ಕ್ಷೇತ್ರದ ಸಂಸದರಾಗಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.