ADVERTISEMENT

ಭಾರತೀಯ ವಿಮಾನಗಳಿಗೆ ಪಾಕ್‌ ವಾಯುಪ್ರದೇಶ ನಿಷೇಧ: ಆಗಸ್ಟ್ 24ರವರೆಗೆ ವಿಸ್ತರಣೆ

ಪಿಟಿಐ
Published 19 ಜುಲೈ 2025, 2:05 IST
Last Updated 19 ಜುಲೈ 2025, 2:05 IST
   

ಲಾಹೋರ್: ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶ ನಿಷೇಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರ (ಪಿಎಎ) ಹೇಳಿದೆ.

ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತದ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶ ಬಳಸಲು ಅನುಮತಿಸಲಾಗುವುದಿಲ್ಲ ಎಂದು ಪಿಎಎ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಕಾಲಮಾನದ ಪ್ರಕಾರ ಜುಲೈ 24ರವರೆಗೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ ಎಂದು ಪಿಎಎ ಖಚಿತಪಡಿಸಿದೆ.

ADVERTISEMENT

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ನಂತರ ರಾಜತಾಂತ್ರಿಕ ಸಂಬಂಧ ಕಳಚಿಕೊಂಡು ಭಾರತ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳಿಗೆ ನಿರ್ಬಂಧ ಹೇರಿರುವುದನ್ನೂ ಒಳಗೊಂಡು ಹಲವು ಕ್ರಮಗಳನ್ನು ಕೈಗೊಂಡಿತ್ತು.

ವಾಯುಪ್ರದೇಶ ನಿರ್ಬಂಧದಿಂದಾಗಿ ಪಶ್ಚಿಮದ ರಾಷ್ಟ್ರಗಳು ಭಾರತಕ್ಕೆ ತುಸು ದೂರವೇ ಆಗಿದೆ. ಇದರಿಂದ ಹೆಚ್ಚಿನ ಇಂಧನ, ಸಿಬ್ಬಂದಿಯ ದುಡಿಮೆ ಅವಧಿಯೂ ಹೆಚ್ಚಳವಾಗುವುದರಿಂದ, ಸಹಜವಾಗಿ ಅದರ ಹೊರೆ ಗ್ರಾಹಕರ ಮೇಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2025ರ ಏ. 24ರಂದು ಪಾಕಿಸ್ತಾನ ಸರ್ಕಾರವು ಸುತ್ತೋಲೆಯೊಂದನ್ನು ಹೊರಡಿಸಿ, ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳು ಹಾರಾಟ ನಡೆಸದಂತೆ ನಿರ್ಬಂಧಿಸುವಂತೆ ಸೂಚಿಸಿತ್ತು. ನಿರ್ಬಂಧಕ್ಕೊಳಗಾದ ಸಂಸ್ಥೆಗಳಲ್ಲಿ ಭಾರತದಲ್ಲಿ ನೋಂದಣಿಯಾದ, ಭಾರತೀಯರು ನಿರ್ವಹಿಸುವ, ಮಾಲೀಕತ್ವ ಹೊಂದಿರುವ ಹಾಗೂ ಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ಭಾರತೀಯ ವಿಮಾನಗಳೂ ಒಳಗೊಂಡಿವೆ.

ಇದರಿಂದಾಗಿ ಭಾರತದ ಇಂಡಿಗೊ ಮತ್ತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗಳು ತಾವು ನಿರ್ವಹಿಸುವ ಉತ್ತರ ಅಮೆರಿಕ, ಬ್ರಿಟನ್, ಯುರೋಪ್‌ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪರ್ಯಾಯ ಮಾರ್ಗದ ಮೂಲಕ ಪ್ರಯಾಣಿಸುವುದಾಗಿ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.