ADVERTISEMENT

ಇಸ್ರೇಲ್‌ನಲ್ಲಿ ಬಾಲಕಿ ಮೇಲೆ 30 ಜನರಿಂದ ಸಾಮೂಹಿಕ ಅತ್ಯಾಚಾರ: ತೀವ್ರ ಪ್ರತಿಭಟನೆ

ಏಜೆನ್ಸೀಸ್
Published 21 ಆಗಸ್ಟ್ 2020, 15:04 IST
Last Updated 21 ಆಗಸ್ಟ್ 2020, 15:04 IST
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಟೆಲ್‌ ಅವಿವ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಯುವತಿ (ಫೇಸ್‌ಬುಕ್‌ ಚಿತ್ರ)
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಟೆಲ್‌ ಅವಿವ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಯುವತಿ (ಫೇಸ್‌ಬುಕ್‌ ಚಿತ್ರ)   

ಜೆರುಸಲೆಂ: ಇಸ್ರೇಲ್‌ನ ಐಲಾಟ್‌ ಎಂಬಲ್ಲಿನ ‘ರೆಡ್‌ ಸೀ’ ರೆಸಾರ್ಟ್‌ನಲ್ಲಿ ಸುಮಾರು 30 ಪುರುಷರು 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ವಿಷಯವು ಅಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಮಾರು 20 ವರ್ಷದ ಪ್ರಾಯದ ಯುವಕರ ಗುಂಪು, ಸಂತ್ರಸ್ತೆ ಇದ್ದ ಹೋಟೆಲ್‌ ಕೊಠಡಿಯ ಹೊರಭಾಗದಲ್ಲಿ ತಮ್ಮ ಸರತಿಗಾಗಿ ಸಾಲುಗಟ್ಟಿ ನಿಂತಿದ್ದರು ಎಂಬ ವರದಿ ಪ್ರಕಟವಾದ ನಂತರವಂತೂ ಇಡೀ ಇಸ್ರೇಲ್‌ ಕಾದ ಕುಲುಮೆಯಂತಾಗಿದೆ.

ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಾಲಕಿಯು ಕಳೆದ ವಾರ ಐಲಾಟ್‌ ಪೊಲೀಸರಿಗೆ ದೂರು ನೀಡಿದ್ದಾಳೆ. ವಾರಕ್ಕೂ ಹಿಂದೆಯೇ ನಡೆದಿದ್ದ ಈ ಲೈಂಗಿಕ ದೌರ್ಜನ್ಯ ಪ್ರಕರಣ ದೂರು ನೀಡುವಲ್ಲಿಯವರೆಗೆ ಬೆಳಕಿಗೇ ಬಂದಿರಲಿಲ್ಲ‌. ಸದ್ಯ ಪ್ರಕರಣದ ಕುರಿತ ಒಂದೊಂದೇ ಸತ್ಯಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಪ್ರತಿಭಟನೆಯ ಮೂಸೆಯಾಗಿ ಪರಿಣಮಿಸಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ವಕ್ತಾರ ಮಿಕಿ ರೋಸನ್‌ಫೀಲ್ಡ್‌ ಹೇಳಿದ್ದಾರೆ.
ಗುರುವಾರ ಸಂಜೆ ಟೆಲ್ ಅವೀವ್ ಮತ್ತು ಜೆರುಸಲೆಮ್‌ನಂಥ ನಗರಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದವು. ಹೀಗಾಗಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ರಾಷ್ಟ್ರದ ನಾಯಕರು ಮಾತನಾಡಲೇಬೇಕಾಯಿತು.

‘ಇದು ಆಘಾತಕಾರಿ. ಇದಕ್ಕೆ ಬೇರೆ ಪದಗಳಿಲ್ಲ. ಇದು ಚಿಕ್ಕ ಹುಡುಗಿಯ ಮೇಲಿನ ಅಪರಾಧ ಮಾತ್ರವಲ್ಲ. ಇದು ಮಾನವೀಯತೆಯ ವಿರುದ್ಧದ ಕ್ರೌರ್ಯ. ಪ್ರಕರಣ ನಮ್ಮೆಲ್ಲರ ಖಂಡನೆಗೆ ಅರ್ಹವಾಗಿದೆ,’ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು. ಅಲ್ಲದೆ, ಶಂಕಿತರನ್ನು ವಿಚಾರಣೆಗೆ ಒಳಪಡಿಸುವಂತೆ ಸೂಚನೆ ನೀಡಿದರು.
ಇಸ್ರೇಲ್‌ನ ಪ್ರತಿಭಟನಾ ನಿರತ ಯುವಕರಿಗೆ ಬಹಿರಂಗ ಪತ್ರ ಬರೆದಿರುವ ಅಧ್ಯಕ್ಷ ರ್ಯುವೆನ್ ರಿವ್ಲಿನ್, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಶೋಷಣೆ, ಲೈಂಗಿಕ ಹಿಂಸೆ ಇವುಗಳೆಲ್ಲ ಅಳಿಸಲಾಗದ ಕಲೆಗಳು. ಅಲ್ಲದೆ, ಕ್ಷಮೆಯ ಅರ್ಹತೆಯನ್ನು ಕಳೆದುಕೊಂಡವುಗಳು. ಅವುಗಳು ಸಮಾಜವನ್ನು ನಾಶಗೊಳಿಸುತ್ತವೆ,’ ಎಂದು ಅವರು ಹೇಳಿದ್ದಾರೆ.

ಬಂಧಿತ ಇಬ್ಬರು ಶಂಕಿತರು ಉತ್ತರ ಇಸ್ರೇಲಿ ಕರಾವಳಿಯ ಹಡೆರಾ ನಿವಾಸಿಗಳಾಗಿದ್ದು, ಅವರು ಈ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿರುವ ಹಿನ್ನೆಲೆ ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದನ್ನು ನಿರಾಕರಿಸಿರುವ ಆರೋಪಿಯೊಬ್ಬ, ತಾನು ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳ ಮಾಹಿತಿ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.