ಬೀಜಿಂಗ್: ಪಹಲ್ಗಾಮ್ ದಾಳಿ ಕುರಿತಾಗಿ ‘ತ್ವರಿತವಾಗಿ, ನ್ಯಾಯಸಮ್ಮತವಾಗಿ ತನಿಖೆ’ ಆಗಬೇಕು ಎಂದು ಚೀನಾ ಹೇಳಿದೆ.
ಮಿತ್ರ ರಾಷ್ಟ್ರವಾದ ಪಾಕಿಸ್ತಾನಕ್ಕೆ ತನ್ನ ಸಾರ್ವಭೌಮತ್ವ ಮತ್ತು ರಕ್ಷಣಾ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಅಗತ್ಯವಿರುವ ಬೆಂಬಲ ಒದಗಿಸುವುದಾಗಿಯೂ ಚೀನಾ ಭರವಸೆ ಇತ್ತಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಉಪ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ಡಾರ್ ಅವರ ಜೊತೆ ಭಾನುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದು ಚೀನಾದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಬಿಗುವಿನ ಪರಿಸ್ಥಿತಿ ಬಗ್ಗೆ ಡಾರ್ ಅವರು ವಾಂಗ್ ಯಿ ಅವರಿಗೆ ಮಾಹಿತಿ ನೀಡಿದರು ಎಂದು ಆ ವರದಿಯು ಹೇಳಿದೆ.
‘ಬಿಕ್ಕಟ್ಟಿನಿಂದ ಭಾರತ ಅಥವಾ ಪಾಕಿಸ್ತಾನದ ಮೂಲಭೂತ ಹಿತಾಸಕ್ತಿ ಗಳಿಗೆ ಒಳಿತಾಗುವುದು ಏನೂ ಇಲ್ಲ. ಬಿಕ್ಕಟ್ಟಿನಿಂದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಕೂಡ ಪ್ರಯೋಜನ ಇಲ್ಲ’ ಎಂದು ವಾಗ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಬಿಕ್ಕಟ್ಟು ಶಮನಗೊಳಿಸಲು ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ ಆಶಾಭಾವನೆಯನ್ನು ಚೀನಾ ವ್ಯಕ್ತಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.