ADVERTISEMENT

Pahalgam Terror Attack: ಸಂಯಮದಿಂದಿರಲು ಭಾರತ– ಪಾಕ್‌ಗೆ ಗುಟೆರೆಸ್‌ ಮನವಿ

ಪಿಟಿಐ
Published 25 ಏಪ್ರಿಲ್ 2025, 12:48 IST
Last Updated 25 ಏಪ್ರಿಲ್ 2025, 12:48 IST
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್   

ವಿಶ್ವಸಂಸ್ಥೆ: ಸದ್ಯದ ಉದ್ವಿಗ್ನ ಸ್ಥಿತಿಯಲ್ಲಿ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನೋಡಿಕೊಳ್ಳಬೇಕು ಎಂದು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮನವಿ ಮಾಡಿದ್ದಾರೆ. 

‘ಎರಡು ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ನಾಗರಿಕರ ಹತ್ಯೆಯಾಗಿದೆ. ಈ ಕೃತ್ಯವನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬಗಳಿಗೆ ಗುಟೆರಸ್‌ ಸಂತಾಪ ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ನಾಗರಿಕರ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ ಎಂಬುದನ್ನು ಒತ್ತಿಹೇಳಿದ್ದಾರೆ’ ಎಂದು ಗುಟೆರಸ್‌ ಅವರ ವಕ್ತರಾರರಾದ ಸ್ಟೀಫನ್ ಡುಜಾರಿಕ್  ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಗುಟೆರಸ್ ಅವರು ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಗುಟೆರಸ್ ಯಾವುದೇ ನೇರ ಸಂಪರ್ಕ ಸಾಧಿಸಿಲ್ಲ. ಆದರೆ ಅವರು ಪರಿಸ್ಥಿತಿಯನ್ನು ತುಂಬಾ ನಿಕಟ ಮತ್ತು ಬಹಳ ಕಾಳಜಿಯಿಂದ ಗಮನಿಸುತ್ತಿದ್ದಾರೆ’ ಎಂದು ಡುಜಾರಿಕ್‌ ಹೇಳಿದರು.

ADVERTISEMENT

‘ಉಭಯ ರಾಷ್ಟ್ರಗಳ ನಡುವಿನ ಯಾವುದೇ ಸಮಸ್ಯೆಗಳನ್ನು ಅರ್ಥಪೂರ್ಣ, ಪರಸ್ಪರ ಮಾತುಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ನಾವು ಎರಡೂ ರಾಷ್ಟ್ರಗಳಿಗೆ ಮನವಿ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.