ಸುಪ್ರಿಯಾ ಸುಳೆ
ಕೈರೊ; ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ತಿಳಿಸುವ ಸಲುವಾಗಿ ಹಾಗೂ ಉಗ್ರ ಚಟುವಟಿಕೆಗಳಿಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನದ ಮುಖವಾಡವನ್ನು ಕಳಚುವ ನಿಟ್ಟಿನಲ್ಲಿ ರಚಿಸಲಾಗಿರುವ ಸರ್ವಪಕ್ಷಗಳ ಸಂಸದರನ್ನೊಳಗೊಂಡ ನಿಯೋಗ ಈಜಿಪ್ಟ್ ತಲುಪಿದೆ.
ಇಥಿಯೋಪಿಯಾದಿಂದ ಆಗಮಿಸಿರುವ ನಿಯೋಗವನ್ನು ಈಜಿಪ್ಟ್‌ನಲ್ಲಿರುವ ರಾಜತಾಂತ್ರಿಕ ಅಧಿಕಾರಿ ಸುರೇಶ್ ರೆಡ್ಡಿ ಸ್ವಾಗತಿಸಿದರು.
ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಈ ಭೇಟಿ ಸಮಯದಲ್ಲಿ ಈಜಿಪ್ಟ್‌ನ ನಾಯಕರು ಮತ್ತು ಅಧಿಕಾರಿಗಳು ಜತೆ ಮಾತುನಡೆ ನಡೆಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಸೇನೆ ಗಡಿಯುದ್ದಕ್ಕೂ ದಾಳಿ ನಡೆಸಿತ್ತು. ಇದರಿಂದಾಗಿ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ, ಕದನ ವಿರಾಮ ಒಪ್ಪಂದ ಜಾರಿಯಲ್ಲಿದೆ.
ಇದೀಗ, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಬಯಲು ಮಾಡುವ ಸಲುವಾಗಿ, ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಂಸದರನ್ನೊಳಗೊಂಡ ವಿವಿಧ ನಿಯೋಗಗಳನ್ನು ರಚಿಸಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಹೊಂದಿರುವ ದೃಢ ನಿಲುವನ್ನು ನಿಯೋಗವು ಅಂತರರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿಕೊಡಲಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೊಂದಿರುವ ಅಸಹಿಷ್ಣುತೆಯ ನೀತಿಯನ್ನು ಪುನರುಚ್ಚರಿಸಲಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.