ಭದ್ರತಾ ಪಡೆ
(ಪಿಟಿಐ ಚಿತ್ರ)
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿಂದಿನ ತನ್ನ ಕೈವಾಡದ ಆರೋಪವನ್ನು ಪಾಕಿಸ್ತಾನ ತಳ್ಳಿ ಹಾಕಿದೆ.
ಈ ಕುರಿತು ಖಾಸಗಿ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಆರೋಪವನ್ನು ನಿರಾಕರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಪಾಕಿಸ್ತಾನಕ್ಕೂ ಯಾವುದೇ ನಂಟು ಇಲ್ಲ. ನಮ್ಮ ಮೇಲೆ ಆರೋಪ ಹೊರಿಸಬೇಡಿ. ಭಯೋತ್ಪಾದನೆಯನ್ನು ನಾವು ಬೆಂಬಲಿಸುವುದಿಲ್ಲ. ಈ ಸಂಬಂಧ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ನಡುವೆ ಭಾರತದಲ್ಲೇ ಆಂತರಿಕವಾಗಿ ಅಶಾಂತಿ ಇದೆ ಎಂದು ಅವರು ಬೊಟ್ಟು ಮಾಡಿದ್ದಾರೆ. ಮಣಿಪುರ ಸೇರಿದಂತೆ ನಾಗಾಲ್ಯಾಂಡ್‌ನಿಂದ ಕಾಶ್ಮೀರದವರೆಗೆ ಭಾರತದ ಸರ್ಕಾರದ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ಅವರು ಹೇಳಿದರು.
ಪಾಕ್ ಸಂತಾಪ...
ಏತನ್ಮಧ್ಯೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸಂತಾಪಗಳನ್ನು ಸೂಚಿಸಿದೆ.
ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಮೃತಪಟ್ಟಿರುವುದು ಅತ್ಯಂತ ಕಳವಳಕಾರಿಯಾಗಿದೆ. ಮೃತರ ಸಂಬಂಧಿಕರಿಗೆ ನಾವು ಸಂತಾಪವನ್ನು ಸೂಚಿಸುತ್ತೇವೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. 2019ರ ಪುಲ್ವಾಮಾದ ಬಳಿಕ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.