ADVERTISEMENT

ಅಮೆರಿಕ ಹೇಳಿದಂತೆ ಕೊಳಕು ಸೇವೆ: ಉಗ್ರರ ಪೋಷಣೆ ಒಪ್ಪಿಕೊಂಡ ಪಾಕ್ ರಕ್ಷಣಾ ಸಚಿವ

ಪಿಟಿಐ
Published 25 ಏಪ್ರಿಲ್ 2025, 12:50 IST
Last Updated 25 ಏಪ್ರಿಲ್ 2025, 12:50 IST
<div class="paragraphs"><p>ಖ್ವಾಜಾ ಆಸಿಫ್</p></div>

ಖ್ವಾಜಾ ಆಸಿಫ್

   

ಲಂಡನ್: ‘ಭಯೋತ್ಪಾದಕ ಸಂಘಟನೆಗಳಿಗೆ ನೆರವು, ತರಬೇತಿ ಮತ್ತು ಆರ್ಥಿಕ ಸಹಕಾರ ನೀಡುತ್ತಾ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಳಕು ಕೆಲಸಗಳನ್ನು ಪಾಕಿಸ್ತಾನ ಮಾಡುತ್ತಲೇ ಬಂದ ತಪ್ಪಿಗೆ ಈಗ ತೀವ್ರವಾಗಿ ಪರಿತಪಿಸುವಂತಾಗಿದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಭಿಪ್ರಾಯಪಟ್ಟಿದ್ದಾರೆ.

ಸ್ಕೈ ನ್ಯೂಸ್‌ ಯಾಲ್ಡಾ ಹಕೀಂ ಅವರು ಕಳಿದ, ‘ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ಸುದೀರ್ಘ ಇತಿಹಾಸ ಇದೆಯೇ’ ಎಂಬ ಪ್ರಶ್ನೆಗೆ ಆಸಿಫ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಇಂಥ ಕೊಳಕು ಕೆಲಸವನ್ನು ಅಮೆರಿಕಕ್ಕಾಗಿ ಮೂರು ದಶಕಗಳಿಂದ ಮಾಡುತ್ತಲೇ ಬಂದಿದ್ದೇವೆ. ಪಶ್ಚಿಮದಲ್ಲಿ ಬ್ರಿಟನ್ ಕೂಡಾ ಸೇರುತ್ತದೆ. ಇದು ಅತಿ ದೊಡ್ಡ ತಪ್ಪು. ಅದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ. ಸೋವಿತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು 9/11 ನಂತರದ ಯುದ್ಧದಲ್ಲಿ ನಾವು ಭಾಗಿಯಾಗದಿದ್ದರೆ ದೋಷಾರೋಪಣೆ ಇಲ್ಲದಂಥ ದಾಖಲೆಯನ್ನು ಪಾಕಿಸ್ತಾನ ಹೊಂದಿರುತ್ತಿತ್ತು’ ಎಂದಿದ್ದಾರೆ.

‘ಈ ಭಾಗದಲ್ಲಿ ಇಂಥ ಯಾವುದೇ ದುರ್ಘಟನೆ ನಡೆದಾಗ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡುವುದು ದೊಡ್ಡವರಿಗೆ ಬಹು ಸುಲಭ. 80ರ ದಶಕದಲ್ಲಿ ನಾವು ಅಮೆರಿಕ ಪರವಾಗಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡುತ್ತಿದ್ದರೆ, ಇಂದಿನ ಈ ಎಲ್ಲಾ ಭಯೋತ್ಪಾದಕರು ವಾಷಿಂಗ್ಟನ್‌ನಲ್ಲಿ ಕೂತು ಸಂಭ್ರಮಿಸುತ್ತಾ ಊಟ ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.

‘ನಂತರ 9/11 ದಾಳಿ ನಡೆಯಿತು. ಆಗಲೂ ಪರಿಸ್ಥಿತಿ ಅದೇ ಆಗಿತ್ತು. ನಮ್ಮ ಸರ್ಕಾರವೂ ತಪ್ಪು ಮಾಡಿದೆ ಎಂದು ನನಗನಿಸುತ್ತಿದೆ. ಪಾಶ್ಚಿಮಾತ್ಯರು ಸದಾ ನಮ್ಮನ್ನು ‘ಬದಲಿ’ಯಾಗಿ ಬಳಸಿಕೊಂಡೇ ಬರುತ್ತಿದ್ದಾರೆ’ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಈ ಕೃತ್ಯವನ್ನು ತಾನೇ ನಡೆಸಿರುವುದಾಗಿ ದಿ ರೆಸಿಸ್ಟನ್ಸ್ ಫ್ರಂಟ್‌ ಹೇಳಿಕೊಂಡಿದೆ. ಈ ಸಂಘಟನೆಯು ನಿಷೇಧಿತ ಲಷ್ಕರ್ ಎ ತಯಬಾದ ಅಂಗಸಂಸ್ಥೆಯಾಗಿದೆ ಎಂದೆನ್ನಲಾಗಿದೆ. 

‘ಇಂಥ ಘಟನೆ ನಡೆದಾಗ ಎಲ್ಲಾ ಕೈಗಳೂ ಪಾಕಿಸ್ತಾನದತ್ತ ಬೊಟ್ಟು ಮಾಡುತ್ತಿವೆ. ಲಷ್ಕರ್ ಎ ತಯಬಾ ಪಾಕಿಸ್ತಾನದಲ್ಲಿ ಈಗಿಲ್ಲ. ಅದು ನಶಿಸಿದೆ. ಮೂಲ ಸಂಘಟನೆಯೇ ಇಲ್ಲದಿರುವಾಗ, ಅದರ ಅಂಗ ಸಂಸ್ಥೆ ಹುಟ್ಟಲು ಹೇಗೆ ಸಾಧ್ಯ’ ಎಂದು ಆಸಿಫ್ ಪ್ರಶ್ನಿಸಿದ್ದಾರೆ.

‘ಈ ಘಟನೆ ನಂತರ ಭಾರತದ ನಿರ್ಬಂಧಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ. ಒಂದೊಮ್ಮೆ ಅವರು ದಾಳಿ ನಡೆಸಲು ಮುಂದಾದರೆ, ಅದು ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ವರ್ಚುವಲ್ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.