ADVERTISEMENT

ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಬಗ್ಗೆ ಜಂಟಿ ತನಿಖೆಗೆ ಆಗ್ರಹಿಸಿದ ಪಾಕ್‌

ಪಿಟಿಐ
Published 11 ಮಾರ್ಚ್ 2023, 2:44 IST
Last Updated 11 ಮಾರ್ಚ್ 2023, 2:44 IST
ಬ್ರಹ್ಮೋಸ್‌ ಕ್ಷಿಪಣಿಯ ಪ್ರಾತಿನಿಧಿಕ ಚಿತ್ರ
ಬ್ರಹ್ಮೋಸ್‌ ಕ್ಷಿಪಣಿಯ ಪ್ರಾತಿನಿಧಿಕ ಚಿತ್ರ    

ಇಸ್ಲಾಮಾಬಾದ್‌: ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತವು ತನ್ನತ್ತ ಉಡಾಯಿಸಿದ ಘಟನೆಯ ಬಗ್ಗೆ ಜಂಟಿ ತನಿಖೆ ನಡೆಯಬೇಕು ಎಂದು ಪಾಕಿಸ್ತಾನವು ಶುಕ್ರವಾರ ಪುನರುಚ್ಚರಿಸಿದೆ. ಒಂದು ವರ್ಷದ ಹಿಂದೆ ನಡೆದ ಘಟನೆಯ ಕುರಿತು ಭಾರತದಿಂದ ಸಮಂಜಸ ಪ್ರತಿಕ್ರಿಯೆಯನ್ನು ಪಾಕಿಸ್ತಾನ ಕೇಳಿದೆ.

2022ರ ಮಾರ್ಚ್‌ 9ರಂದು ರಾಜಸ್ಥಾನದ ಸೂರತ್‌ಗಢದಿಂದ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಅಪ್ಪಳಿಸಿತ್ತು. ಘಟನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಕಚೇರಿ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.

ನಿರ್ದಿಷ್ಟ ಕಾರ್ಯಾಚರಣೆ ವಿಧಾನದಲ್ಲಿ ಉಂಟಾದ ಅಚಾತುರ್ಯದಿಂದ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕಿಸ್ತಾನದಲ್ಲಿ ಬಿದ್ದಿತ್ತು. ತನಿಖೆ ವೇಳೆ ಅಧಿಕಾರಿಗಳ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ವಾಯುಪಡೆಯ ಮೂವರು ಅಧಿಕಾರಿಗಳನ್ನು ಆಗಸ್ಟ್‌ನಲ್ಲಿ ವಜಾ ಮಾಡಿತ್ತು.

ADVERTISEMENT

‘ಈ ಗಂಭೀರ ಘಟನೆಯ ಸುತ್ತಲಿನ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯಲು ಜಂಟಿ ತನಿಖೆ ನಡೆಯಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಭಾರತ ಸರ್ಕಾರ ಒಂದು ವರ್ಷ ಕಳೆದರೂ ಒಪ್ಪಿಕೊಂಡಿಲ್ಲ. ಭಾರತವು ತನ್ನ ಆಂತರಿಕ ವಿಚಾರಣೆಯನ್ನೂ ಪಾಕಿಸ್ತಾನದೊಂದಿಗೆ ಹಂಚಿಕೊಂಡಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

‘ಆಂತರಿಕ ವಿಚಾರಣೆಯನ್ನು ಭಾರತ ಏಕಪಕ್ಷೀಯವಾಗಿ ಮತ್ತು ತರಾತುರಿಯಲ್ಲಿ ಮುಚ್ಚಿಹಾಕಿದೆ. ಇದು ಭಾರತವು ತನ್ನ ಕಾರ್ಯತಂತ್ರದ ಅಸ್ತ್ರಗಳನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಲು ಕಾರಣವಾಗಿದೆ. ಈ ಬೇಜವಾಬ್ದಾರಿ ಘಟನೆಯ ಜಂಟಿ ತನಿಖೆಗಾಗಿ ಪಾಕಿಸ್ತಾನವು ತನ್ನ ಬೇಡಿಕೆಯನ್ನು ಪುನರುಚ್ಚರಿಸುತ್ತದೆ’ ಎಂದು ವಿದೇಶಾಂಗ ತಿಳಿಸಿದೆ.

‘ಸುರಕ್ಷತಾ ಶಿಷ್ಟಾಚಾರಗಳು ಮತ್ತು ಕ್ಷಿಪಣಿಗಳ ಉಡಾವಣೆಗೆ ಸಂಬಂಧಿಸಿದ ಸುರಕ್ಷತೆಗಳ ಬಗ್ಗೆ ನಮಗಿರುವ ಪ್ರಶ್ನೆಗಳಿಗೆ ಭಾರತದ ಕಡೆಯಿಂದ ಸಮಂಜಸ ಪ್ರತಿಕ್ರಿಯೆ ಮತ್ತು ಸ್ಪಷ್ಟೀಕರಣವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಪಾಕ್‌ ಹೇಳಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.