ADVERTISEMENT

ಬಂಧನಕ್ಕೆ ತಡೆ: ಇಮ್ರಾನ್‌ ನಿರಾಳ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 15:59 IST
Last Updated 17 ಮಾರ್ಚ್ 2023, 15:59 IST
ಪಾಕಿಸ್ತಾನದ ಲಾಹೋರ್‌ನಲ್ಲಿ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ನಿವಾಸದ ಬಳಿ ಶುಕ್ರವಾರ ಸೇರಿದ್ದ ಅವರ ಬೆಂಬಲಿಗರು ಇಮ್ರಾನ್‌ ಪರ ಘೋಷಣೆ ಕೂಗಿದರು– ಎಎಫ್‌ಪಿ ಚಿತ್ರ
ಪಾಕಿಸ್ತಾನದ ಲಾಹೋರ್‌ನಲ್ಲಿ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ನಿವಾಸದ ಬಳಿ ಶುಕ್ರವಾರ ಸೇರಿದ್ದ ಅವರ ಬೆಂಬಲಿಗರು ಇಮ್ರಾನ್‌ ಪರ ಘೋಷಣೆ ಕೂಗಿದರು– ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌/ಲಾಹೋರ್‌ (ಪಿಟಿಐ): ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಇದೇ 18ರೊಳಗೆ ಹಾಜರುಪಡಿಸಲು ಹೊರಡಿಸಿದ್ದ ವಾರಂಟ್‌ ಅನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಶುಕ್ರವಾರ ಅಮಾನತಿನಲ್ಲಿರಿಸಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಮೀರ್‌ ಫಾರೂಕ್‌ ಅವರು, ಲಾಹೋರ್‌ ಹೈಕೋರ್ಟ್‌ಗೆ ಹಾಜರಾಗಲು ಇಮ್ರಾನ್‌ ಖಾನ್‌ ಅವರಿಗೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಲೂ ಸೂಚಿಸಿದರು.

ಬಂಧನ ವಾರಂಟ್‌ ಅಮಾನತಾದ ಕೆಲವೇ ತಾಸುಗಳಲ್ಲಿ ಇಮ್ರಾನ್‌ ಖಾನ್‌ ಅವರು ಗುಂಡುನಿರೋಧಕ ವಾಹನದಿಂದ ಲಾಹೋರ್‌ ಹೈಕೋರ್ಟ್‌ ತಲು‍ಪಿ, ಒಂಬತ್ತು ಪ್ರಕರಣಗಳಲ್ಲಿ ಬಂಧನದ ವಿರುದ್ಧ ರಕ್ಷಣೆಯ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ADVERTISEMENT

ಭಯೋತ್ಪಾದನೆಯ ವಿವಿಧ ಸೆಕ್ಷನ್‌ಗಳಡಿಯ ಪ್ರಕರಣಗಳು ಮತ್ತು ಸಿವಿಲ್‌ ಪ್ರಕರಣಗಳಲ್ಲಿ ಬಂಧಿಸದಂತೆ ಕೋರಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸಲೀಂ ಶೇಖ್‌ ಮತ್ತು ಫಾರೂಕ್‌ ಹೈದರ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ ಎಂದು ಪಾಕಿಸ್ತಾನದ ‘ಜಿಯೊ ಟಿ.ವಿ’ ವರದಿ ಮಾಡಿದೆ.

ತೋಶಾಖಾನಾ ಪ್ರಕರಣ ಸಂಬಂಧ ಜಾರಿಯಾಗಿದ್ದ ಜಾಮೀನು ರಹಿತ ಬಂಧನ ವಾರಂಟ್‌ ರದ್ದುಪಡಿಸುವಂತೆ ಕೋರಿದ್ದ ಇಮ್ರಾನ್‌ ಅವರ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಫರ್‌ ಇಕ್ಬಾಲ್‌ ಗುರುವಾರ ವಜಾಗೊಳಿಸಿದ್ದರು. ಇದೇ 18ರೊಳಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಿದ್ದರು.

ಹೈಕೋರ್ಟ್‌ ತೀರ್ಪಿನಿಂದ ಇಮ್ರಾನ್‌ ಖಾನ್‌ ಸದ್ಯ ನಿರಾಳರಾಗಿದ್ದು, ಇಸ್ಲಾಮಾಬಾದ್‌ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಅವರಿಗೆ ಅವಕಾಶ ಸಿಕ್ಕಿದೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಮ್ರಾನ್‌ ಸುಮಾರು 80 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ವಾರದ ಆರಂಭದಲ್ಲೇ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಮುಂದಾದ ಪೊಲೀಸರು ಮತ್ತು ಇಮ್ರಾನ್‌ ರಕ್ಷಣೆಗೆಂದು ಜಮಾಯಿಸಿದ್ದ ಪಿಟಿಐ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿತ್ತು. ಪಿಟಿಐ ಕಾರ್ಯಕರ್ತರು ಮತ್ತು ಕೆಲವು ಪೊಲೀಸರೂ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.