ADVERTISEMENT

ಪ್ರವಾದಿ ಮೊಹಮ್ಮದರ ಅವಹೇಳನ: ಕತಾರ್, ಕುವೈತ್‌ ನಂತರ ಈಗ ಪಾಕ್‌ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 5:27 IST
Last Updated 6 ಜೂನ್ 2022, 5:27 IST
ಶಾಹಬಾಝ್‌ ಷರೀಫ್
ಶಾಹಬಾಝ್‌ ಷರೀಫ್    

ಇಸ್ಲಾಮಾಬಾದ್‌: ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಕುರಿತ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಯನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಶಾಹಬಾಝ್‌ ಷರೀಫ್ ಭಾನುವಾರ ಖಂಡಿಸಿದ್ದಾರೆ.

‘ಪ್ರವಾದಿ ಮೊಹಮ್ಮದರ ಬಗ್ಗೆ ಭಾರತದ ಬಿಜೆಪಿ ನಾಯಕರ ನೋವುಂಟುಮಾಡುವ ಮಾತುಗಳನ್ನು ನಾನು ಕಠಿಣ ಪದಗಳಿಂದ ಖಂಡಿಸುತ್ತೇನೆ. ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ತುಳಿಯಲಾಗುತ್ತಿದೆ. ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ ಎಂದು ನಾನು ಪದೇ ಪದೇ ಹೇಳುತ್ತಲೇ ಇದ್ದೇನೆ. ಜಗತ್ತು ಇದನ್ನು ಗಮನಿಸಬೇಕು ಮತ್ತು ಭಾರತವನ್ನು ತೀವ್ರವಾಗಿ ಖಂಡಿಸಬೇಕು‘ ಎಂದು ಅವರು ಹೇಳಿದ್ದಾರೆ.

‘ಪ್ರವಾದಿ ಮೇಲಿನ ನಮ್ಮ ಪ್ರೀತಿ ಅತ್ಯುನ್ನತವಾದದ್ದು. ಎಲ್ಲಾ ಮುಸ್ಲಿಮರು ಪ್ರವಾದಿಯ ಪ್ರೀತಿ ಮತ್ತು ಗೌರವಕ್ಕಾಗಿ ತಮ್ಮ ಜೀವನವನ್ನೂ ತ್ಯಾಗ ಮಾಡಬಲ್ಲರು’ ಎಂದು ಷರೀಫ್‌ ಹೇಳಿದ್ದಾರೆ.

ADVERTISEMENT

ಟಿ.ವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ಮತ್ತು ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಇರಾನ್‌, ಕುವೈತ್‌, ಕತಾರ್‌ನಿಂದ ಆಕ್ಷೇಪ ವ್ಯಕ್ತವಾಗಿದೆ. ಇದರ ನಡುವೆಯೇ ಪಾಕಿಸ್ತಾನದ ಪ್ರಧಾನಿಯೂ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ವಿದೇಶಗಳಲ್ಲಿ ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಲೇ ಕೇಂದ್ರ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ನೂಪುರ್‌ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರೆ, ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದ ಹೊರ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.