ADVERTISEMENT

ಶೆಹಬಾಜ್‌ ಷರೀಫ್ -ಷಿ ಜಿನ್‌ಪಿಂಗ್ ಭೇಟಿ: ಸಿಪಿಇಸಿ ಬಲಪಡಿಸಲು ಒಪ್ಪಿಗೆ

ಪಿಟಿಐ
Published 2 ನವೆಂಬರ್ 2022, 12:39 IST
Last Updated 2 ನವೆಂಬರ್ 2022, 12:39 IST
ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.   

ಬೀಜಿಂಗ್: ಮೊದಲ ಬಾರಿಗೆ ಬೀಜಿಂಗ್‌ಗೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ಈ ಸಂದರ್ಭದಲ್ಲಿ ಸಹಕಾರ ವೃದ್ಧಿ, ‌ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಬಲಪಡಿಸಲು ಒಪ್ಪಿಕೊಂಡರು.

ಪ್ರಧಾನಿಯಾದ ನಂತರ ಷಿ ಅವರೊಂದಿಗೆ ಶೆಹಬಾಜ್ ಅವರ ಎರಡನೇ ಭೇಟಿ ಇದಾಗಿದೆ. ಕಳೆದ ತಿಂಗಳು ಉಜ್ಬೇಕಿಸ್ತಾನದ ಸಮರಖಂಡದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಷಿ ಅವರನ್ನು ಭೇಟಿಯಾಗಿದ್ದರು.

ಶೃಂಗಸಭೆಯಲ್ಲಿ ‌‌ಸಿಪಿಇಸಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಚೀನಿಯರಿಗೆ ರಕ್ಷಣೆ ಒದಗಿಸುವಂತೆ ಷಿ ಕರೆ ನೀಡಿದ್ದರು.

ADVERTISEMENT

ಚೀನಾದ ಪೀಪಲ್ಸ್ ಗ್ರೇಟ್ ಹಾಲ್‌ನಲ್ಲಿ ಶೆಹಬಾಜ್ ಮತ್ತು ಷಿ ಅವರು ಭೇಟಿಯಾಗಿ, ಆರ್ಥಿಕತೆ ಮತ್ತು ಹೂಡಿಕೆ ಸಹಕಾರದ ಬಗ್ಗೆ ಚರ್ಚಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಎಪಿಪಿ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

ಸಿಪಿಇಸಿ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹುಪಕ್ಷೀಯ ಸಹಕಾರ ಬಲಪಡಿಸಲು ಉಭಯ ನಾಯಕರು ಒಪ್ಪಿಕೊಂಡರು ಎಂದು ವರದಿ ತಿಳಿಸಿದೆ.

ಈ ಸಂದರ್ಭದಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.