ADVERTISEMENT

ಸೆ.15ರಿಂದ ಪಾಕಿಸ್ತಾನದಲ್ಲಿ ಶಾಲಾ, ಕಾಲೇಜು ಪುನರಾರಂಭ

ಪಿಟಿಐ
Published 29 ಆಗಸ್ಟ್ 2020, 9:27 IST
Last Updated 29 ಆಗಸ್ಟ್ 2020, 9:27 IST
ಇಮ್ರಾನ್‌ ಖಾನ್
ಇಮ್ರಾನ್‌ ಖಾನ್   

ಇಸ್ಲಾಮಾಬಾದ್‌: ‘ಸೆಪ್ಟೆಂಬರ್ 15ರಿಂದ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳು ಪುನರಾರಂಭವಾಗಲಿವೆ’ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ. ಕೊರೊನಾ ಸೋಂಕಿನ ಕಾರಣ ಪಾಕಿಸ್ತಾನದಲ್ಲಿಮಾರ್ಚ್‌ 16ರಿಂದ ಶಾಲಾ, ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು.

‘ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್‌ಸಿಸಿ) ಸಭೆಯಲ್ಲಿ ಕೋವಿಡ್‌–19 ಬಿಕ್ಕಟ್ಟಿನ ಕುರಿತು ಚರ್ಚಿಸಲಾಯಿತು. ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವ ಬಗ್ಗೆ ಪ್ರಧಾನಿ ಒಲವು ತೋರಿದರು. ಸೆಪ್ಟೆಂಬರ್‌ 7ಕ್ಕೆ ಮತ್ತೊಂದು ಸಭೆ ನಡೆಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು’ ಎಂದು ಪ್ರಕಟಣೆ ಹೇಳಿದೆ.

ADVERTISEMENT

‘ಪ್ರೌಢಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಹಿರಿಯ ಮತ್ತು ಕಿರಿಯ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸದ್ಯಕ್ಕೆ ಆರಂಭಿಸದಿರಲು ನಿಶ್ಚಯಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶನಿವಾರ ಬೆಳಿಗ್ಗೆ 8 ಗಂಟೆವರೆಗಿನ ಹಿಂದಿನ 24 ತಾಸುಗಳಲ್ಲಿ 319 ಮಂದಿ ಸೋಂಕಿತರಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 6,284ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆಯು 2.95 ಲಕ್ಷಕ್ಕೆ ಹೆಚ್ಚಿದೆ’ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.