
ತಾಲಿಬಾನ್ ಭದ್ರತಾ ಪಡೆಯ ಸಿಬ್ಬಂದಿ
ಇಸ್ಲಾಮಾಬಾದ್: ಅಫ್ಗಾನಿಸ್ತಾನ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗನ್‌ನ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಮಂಗಳವಾರ ಬೆಳಗಿನ ಜಾವ ನೈರುತ್ಯ ಭಾಗದ ಗಡಿಯಲ್ಲಿ ನಡೆದ ಪಾಕಿಸ್ತಾನ ಸೇನೆಯ ದಾಳಿಗಳಲ್ಲಿ 69 ತಾಲಿಬಾನ್ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರು ಸತ್ತಿದ್ದಾರೆ ಎಂದು ತಿಳಿಸಿದೆ.
ಈ ಮೊದಲು ದಾಳಿ ಶುರುವಾತಿನಿಂದ ಸುಮಾರು 331 ಅಫ್ಗನ್‌ನ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ತಿಳಿಸಿತ್ತು.
ಅನೇಕ ತಾಲಿಬಾಲಿನಿಗಳು ಚಮನ್ ಜಿಲ್ಲೆಯ ಗಡಿಯಲ್ಲಿ ಯಾವುದೇ ಶಸ್ತ್ರಗಳಿದಲ್ಲದೇ ನಮ್ಮವರನ್ನು ಬರಿಗೈಯಲ್ಲಿ ಎದುರಿಸಲು ಬಂದು ಹತರಾಗಿದ್ದಾರೆ ಎಂದು ಮಾಹಿತ ಸಚಿವ ಆತುಲ್ಲಾ ತಾರರ್ ತಿಳಿಸಿದ್ದಾರೆ.
ಖೈಬರ್ ಪಂಕ್ತುವ್ವಾ ಪ್ರಾಂತ್ಯದ 12 ಸ್ಥಳಗಳಲ್ಲಿ ಅಫ್ಗನ್ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ಕಡೆ ಇಂದು ಯಾವುದೇ ಸಾವು ನೋವುಗಳಾಗಿಲ್ಲ ಎಂದು ವಿವರಿಸಿದ್ದಾರೆ.
ಪಾಕಿಸ್ತಾನ–ಅಫ್ಗಾನಿಸ್ತಾನದ 2,600 ಕಿಲೋ ಮೀಟರ್ ಉದ್ದದ ಗಡಿಗೆ ಹೊಂದಿಕೊಂಡ ಪಾಕ್‌ನ 53 ಸ್ಥಳಗಳನ್ನು ಗುರಿಯಾಗಿಸಿ ಅಫ್ಗಾನಿಸ್ತಾನ ಕಳೆದ ಫೆಬ್ರುವರಿ 26 ರಂದು ದಾಳಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಶುಕ್ರವಾರ ಪಾಕಿಸ್ತಾನ ಸೇನೆ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಕಂದಹಾರ್‌ಗಳ ಮೇಲೂ ಬಾಂಬ್ ದಾಳಿ ನಡೆಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅಫ್ಗನಿಸ್ತಾನದಿಂದ ಪಾಕಿಸ್ತಾನದ ಕಡೆಗೆ ಡ್ರೋನ್ ದಾಳಿ ಮುಂದುವರಿದ ಕಾರಣ ಪಾಕಿಸ್ತಾನದ ಗಡಿಯ ಅನೇಕ ಜಿಲ್ಲೆಗಳಲ್ಲಿ ಶಾಲಾ– ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಮೊಹಮಂದ್‌ನಲ್ಲಿ 54, ಘಲಾನೈನಲ್ಲಿ 1, ಬೈಜೈನಲ್ಲಿ 33, ಸಫಿಯಲ್ಲಿ 10 ಹಾಗೂ ಖ್ವೆಜೈನಲ್ಲಿ 2 ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ವಜೀರಿಸ್ತಾನದಲ್ಲಿ 33, ಬಾಜೌರ್‌ನಲ್ಲಿ 39 ಶಾಲೆಗಳಿಗೂ ಬೀಗ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.