
ಇಸ್ಲಾಮಾಬಾದ್ : ‘ಭಾರತವು ತನ್ನ ವೈಫಲ್ಯವನ್ನು ಮರೆಮಾಚಲು ಪ್ರಾದೇಶಿಕ ಅಸ್ಥಿರತೆ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದೆ’ ಎಂದು ಪಾಕಿಸ್ತಾನ ಶನಿವಾರ ಟೀಕಿಸಿದೆ.
‘ಭಾರತದ ಬೇಜವಾಬ್ದಾರಿ ಹೇಳಿಕೆಗಳನ್ನು ಪಾಕಿಸ್ತಾನವು ತಿರಸ್ಕರಿಸಲಿದೆ’ ಎಂದು ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿಂಧೂ ಜಲ ಒಪ್ಪಂದವು (ಐಡಬ್ಲ್ಯುಟಿ) ಅಚಲ ನಂಬಿಕೆಯಿಂದ ತೀರ್ಮಾನಿಸಲಾದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಯಾವುದೇ ಏಕಪಕ್ಷೀಯ ಉಲ್ಲಂಘನೆಯು ಪ್ರಾದೇಶಿಕ ಸ್ಥಿರತೆಯನ್ನು ಹಾಳು ಮಾಡುತ್ತದೆ ಎಂದು ಅವರು ಹೇಳಿದರು.
ಈ ಒಪ್ಪಂದದ ಅಡಿಯಲ್ಲೇ ಪಾಕಿಸ್ತಾನವು ತನ್ನ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ಹೆಸರು ಪ್ರಸ್ತಾಪಿಸಿದೆ, ‘ನೆರೆಹೊರೆಯ ದುಷ್ಟ ದೇಶ’ ಎಂದು ಶುಕ್ರವಾರ ಟೀಕಿಸಿದ್ದರು. ದೇಶದೊಳಗೆ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಪಕ್ಕದ ದುಷ್ಟ ರಾಷ್ಟ್ರವು ನಮ್ಮೊಂದಿಗೆ ನೀರು ಹಂಚಿಕೊಳ್ಳಿ ಎಂದು ಕೇಳುವಂತಿಲ್ಲ ಎಂದೂ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.