ADVERTISEMENT

ಚೀನಾಕ್ಕೆ ಪಾಕಿಸ್ತಾನದಿಂದ 1 ಲಕ್ಷ ಕೆಜಿ ತಲೆಗೂದಲು ರಫ್ತು!

ಪಿಟಿಐ
Published 19 ಜನವರಿ 2019, 13:18 IST
Last Updated 19 ಜನವರಿ 2019, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಚೀನಾದಲ್ಲಿ ಮಾನವನ ತಲೆಯ ಕೂದಲಿಗೆ ಭಾರೀ ಬೇಡಿಕೆಯಿದ್ದು, ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ ಸುಮಾರು 1 ಲಕ್ಷ ಕೆಜಿ ಕೂದಲು ರಫ್ತು ಮಾಡಿದೆ.

ಅಂದಾಜು ₹94 ಲಕ್ಷ ಮೌಲ್ಯದ 1,05,461 ಕೆಜಿ ತೂಕದಷ್ಟು ಮನುಷ್ಯರ ಕೂದಲು ಚೀನಾಗೆ ರಫ್ತು ಮಾಡಿರುವುದಾಗಿ ಪಾಕಿಸ್ತಾನದ ವಾಣಿಜ್ಯ ಮತ್ತು ಜವಳಿ ಸಚಿವಾಲಯ ಸಂಸತ್ತಿಗೆತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನವು ₹94 ಲಕ್ಷ ಮೌಲ್ಯದ (1.32 ಲಕ್ಷ ಡಾಲರ್‌)ತಲೆಗೂದಲನ್ನು ಚೀನಾಕ್ಕೆ ರಫ್ತು ಮಾಡಿದೆ.

ADVERTISEMENT

‘ವಿಗ್‌ ಧರಿಸುವುದು ಇತ್ತೀಚಿನ ದಿನಗಳಲ್ಲಿ ಪ್ರವೃತ್ತಿ ಹೆಚ್ಚುತ್ತಿದೆ. ಸೌಂದರ್ಯವರ್ಧಕ ಕೈಗಾರಿಕೆಗಳಿಂದ ಮಾನವನ ತಲೆಗೂದಲಿಗೆ ಚೀನಾದಲ್ಲಿ ಭಾರೀ ಬೇಡಿಕೆಯಿದೆ.’ ಎಂದು ಜವಳಿ ಹಾಗೂ ವಾಣಿಜ್ಯ ಇಲಾಖೆ ತಿಳಿಸಿದೆ.

ದೇಶಿಯವಾಗಿ ತಲೆಗೂದಲಿಗಿರುವ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಈ ಕಾರಣದಿಂದ ಪಾಕಿಸ್ತಾನದಿಂದ ಕಳುಹಿಸಿಕೊಡಲಾಗಿದೆ. ಪ್ರತೀ ಕೆ.ಜಿಗೆ 5 ರಿಂದ 6 ಸಾವಿರ ರೂಪಾಯಿಯಷ್ಟು ಬೆಲೆಯಿದೆ ಎಂದು ಪಾಕಿಸ್ತಾನದ ಪ್ರಮುಖ ಸೌಂದರ್ಯತಜ್ಞ ಎ.ಎಂ.ಚೌಹಾಣ್‌ ತಿಳಿಸಿದರು.

ಮೇಕಪ್‌ ಉದ್ಯಮದಲ್ಲಿನ ಬೆಳವಣಿಗೆಯಿಂದಾಗಿ ಚೀನಾದಲ್ಲಿ ತಲೆಯ ಕೂದಲಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಮನುಷ್ಯರ ಕೂದಲಿಂದ ಸಿದ್ಧಪಡಿಸಿದ ವಿಗ್‌ಗಳನ್ನು ಫ್ಯಾಷನ್‌ ಆಗಿ ಧರಿಸುತ್ತಿರುವುದು ಟ್ರೆಂಡ್‌ ಆಗಿದೆ.

ಜಪಾನ್‌ ಹಾಗೂ ಅಮೆರಿಕದ ಮನರಂಜನಾ ಕ್ಷೇತ್ರದಲ್ಲಿಯೂ ಕೂದಲಿಗೆ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಕೂದಲನ್ನು ಅಲ್ಲಿಗೂ ರಫ್ತು ಮಾಡಲಾಗುತ್ತದೆ. ಆದರೆ, ಪಾಕಿಸ್ತಾನ ವಿಗ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.