ADVERTISEMENT

ಅಫ್ಗನ್‌ ಅಸ್ಥಿರತೆಯಲ್ಲಿ ಪಾಕ್‌ನದ್ದು ಸಕ್ರಿಯ ಪಾತ್ರ: ಸಿಆರ್‌ಎಸ್ ವರದಿ

ಪಿಟಿಐ
Published 12 ನವೆಂಬರ್ 2021, 5:40 IST
Last Updated 12 ನವೆಂಬರ್ 2021, 5:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಫ್ಗಾನಿಸ್ತಾನದ ಆಂತರಿಕ ವ್ಯವಹಾರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಹಲವು ರೀತಿಯಲ್ಲಿ ಸುದೀರ್ಘ ಕಾಲದಿಂದ ಸಕ್ರಿಯವಾಗಿತ್ತು ಎಂದು ಅಫ್ಗಾನಿಸ್ತಾನ ಕುರಿತ ಅಮೆರಿಕದ ಸಿಆರ್‌ಎಸ್‌ ವರದಿ ಹೇಳಿದೆ. ಅಮೆರಿಕದ ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆ ಸಿಆರ್‌ಎಸ್‌ನ ಕ್ಷೇತ್ರ ಪರಿಣತರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಪಾಕಿಸ್ತಾನ ರಷ್ಯಾ, ಚೀನಾ ಹಾಗೂ ಕತಾರ್ ಸೇರಿದಂತೆ ಅಮೆರಿಕದ ಪಾಲುದಾರ ರಾಷ್ಟ್ರಗಳು ತಾಲಿಬಾನ್ ಅನ್ನು ವಿಶಾಲ ದೃಷ್ಟಿಕೋನದಲ್ಲಿ ಸ್ವೀಕರಿಸಿದಲ್ಲಿ ಈ ಬೆಳವಣಿಗೆಯು ಅಮೆರಿಕವನ್ನು ಪ್ರತ್ಯೇಕಗೊಳಿಸಬಹುದು. ಇಂತಹ ಹೆಜ್ಜೆಯು ಪರೋಕ್ಷವಾಗಿ ಅಮೆರಿಕದ ಒತ್ತಡವನ್ನು ಎದುರಿಸಲು ತಾಲಿಬಾನ್‌ಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕವು ತಕ್ಷಣದಲ್ಲಿ ತೆಗೆದುಕೊಳ್ಳಬಹುದಾದ ಯಾವುದೇ ದಂಡನೀಯ ಕ್ರಮಗಳು ಈಗಾಗಲೇ ತಾಲಿಬಾನ್‌ ಆಡಳಿತದಿಂದಾಗಿ ಅಪ್ಗಾನಿಸ್ತಾನದಲ್ಲಿ ಹದಗೆಟ್ಟಿರುವ ಮಾನವೀಯ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಅಮೆರಿಕದ ಸಂಸದರಿಗೆ ನಿರ್ಧಾರ ಕೈಗೊಳ್ಳುವ, ನೀತಿ ರೂಪಿಸುವ ಮುನ್ನ ವಿಷಯ ಸಂಬಂಧ ಪೂರ್ಣ ಜಾಗೃತಿ ಮೂಡಿಸಲು ಸಿಆರ್‌ಎಸ್ ಇಂತಹ ವರದಿಗಳನ್ನು ರೂಪಿಸಲಿದೆ. ಇದನ್ನು ಅಮೆರಿಕ ಸಂಸತ್ತಿನ ಅಧಿಕೃತ ಚಿಂತನೆ ಎಂದೂ ಭಾವಿಸಲಾಗುತ್ತದೆ.

ಅಪ್ಗಾನಿಸ್ತಾನದ ಆಂತರಿಕ ಚಟುವಟಿಕೆಗಳನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಸುದೀರ್ಘ ಕಾಲದಿಂದ ಹಲವು ರೀತಿಯಿಂದ ಸಕ್ರಿಯ ಪಾತ್ರ ವಹಿಸುತ್ತಿದೆ. ಇದರಲ್ಲಿ ತಾಲಿಬಾನ್‌ಗೆ ಸಕ್ರಿಯ ಮತ್ತು ಪರೋಕ್ಷವಾಗಿ ಬೆಂಬಲಿಸುವುದು ಸೇರಿದೆ ಎಂದು ಹೇಳಿದೆ.

ಈಗಲೂ ಪಾಕಿಸ್ತಾನದ ಅಧಿಕಾರಿಗಳು ತಾಲಿಬಾನ್ ಮೇಲೆ ನಮ್ಮ ಪ್ರಭಾವ ಸೀಮಿತವಾದುದು ಎಂದೇ ಹೇಳಿಕೊಳ್ಳುತ್ತಾರೆ. ಇನ್ನೊಂದೆಡೆ, ಪಾಕ್‌ನ ಉನ್ನತ ಅಧಿಕಾರಿಗಳು ತಾಲಿಬಾನ್ ಪರವಾಗಿ ಹೇಳಿಕೆ ನೀಡುತ್ತಾರೆ. ಈಗ ತಾಲಿಬಾನ್ ಅಧಿಕಾರವನ್ನು ವಶಕ್ಕೆ ಪಡೆದಿರುವುದು ಪಾಕಿಸ್ತಾನಕ್ಕೆ ಸವಾಲು ಹಾಗೂ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಆಗಸ್ಟ್‌ 15ರಂದು ಕಾಬೂಲ್ ಅನ್ನುತಾಲಿಬಾನ್ ವಶಪಡಿಸಿಕೊಂಡ ಬಳಿಕ ಪಾಕಿಸ್ತಾನವು, ಜಗತ್ತಿನ ಇತರೆ ದೇಶಗಳಿಗೆ ತಾಲಿಬಾನ್ ಜೊತೆಗೆ ರಾಜತಾಂತ್ರಿಕವಾಗಿ ವ್ಯವಹರಿಸಬೇಕು ಎಂದು ಮನವೊಲಿಸಲು ಯತ್ನಿಸುತ್ತಿದೆ. ಆದರೆ, ಅಂತರರಾಷ್ಟ್ರೀಯ ಸಮುದಾಯ ಇಂದಿಗೂ ತಾಲಿಬಾನ್‌ ಕುರಿತಂತೆ ಸಂಶಯಾಸ್ಪದ ಭಾವನೆಯನ್ನೇ ಹೊಂದಿದೆ.

ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಾಲಿಬಾನ್‌ ಆಡಳಿತವನ್ನು ಒಪ್ಪಿಕೊಳ್ಳುವುದು ಹಾಗೂ ಪ್ರಜಾಸತ್ತಾತ್ಮಕ ಕ್ರಮದಲ್ಲಿ ನಿರ್ವಹಣೆ ಮಾಡದೇ ಇರುವುದು ಅಥವಾ ಮಾನವ ಹಕ್ಕುಗಳನ್ನು ರಕ್ಷಿಸದಿರುವುದು ಕೂಡಾ ಸಮಸ್ಯೆ ತಂದೊಡ್ಡಬಹುದು. ಮುಖ್ಯವಾಗಿ ಇದು, ಅಮೆರಿಕದ ನೀತಿ ನಿರೂಪಕರಿಗೆ ಸವಾಲಿನ ಕಾರ್ಯವಾಗಿದೆ ಎಂದು ವರದಿ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.