ವಾಷಿಂಗ್ಟನ್: ಪಾಕಿಸ್ತಾನವು ಅಂತರರಾಷ್ಟ್ರೀಯ ಮಟ್ಟದ 12 ನಿಷೇಧಿತ ಉಗ್ರ ಸಂಘಟನೆಗಳಿಗೆ ನೆಲೆಯಾಗಿದೆ ಎಂದು ಅಮೆರಿಕದ ಸಿಆರ್‌ಎಸ್ (ಸಂಸದೀಯ ಸಂಶೋಧನಾ ಸೇವೆ) ವರದಿ ಹೇಳಿದೆ. ಲಷ್ಕರ್–ಎ–ತಯ್ಬಾ ಮತ್ತು ಜೈಷ್–ಎ–ಮೊಹಮ್ಮದ್ ಕೂಡ ಇದರಲ್ಲಿ ಸೇರಿವೆ.
ಸಶಸ್ತ್ರ ಭಯೋತ್ಪಾದಕ ಗುಂಪುಗಳ ಕಾರ್ಯಾಚರಣೆಗೆ ಪಾಕಿಸ್ತಾನವು ನೆಲೆಯಾಗಿದೆ. ಈ ಪೈಕಿ ಕೆಲವು ಉಗ್ರ ಸಂಘಟನೆಗಳು 1980ರಿಂದಲೂ ಅಲ್ಲಿ ಅಸ್ತಿತ್ವದಲ್ಲಿವೆ ಎಂದು ವರದಿ ಹೇಳಿದೆ.
ಇತ್ತೀಚೆಗೆ ನಡೆದ ಐತಿಹಾಸಿಕ ಕ್ವಾಡ್ ಶೃಂಗಸಭೆಯ ಮುನ್ನಾ ದಿನ ಅಮೆರಿಕ ಕಾಂಗ್ರೆಸ್‌ನ ದ್ವಿಪಕ್ಷೀಯ ಸಂಶೋಧನಾ ವಿಭಾಗವು ವರದಿ ಬಿಡುಗಡೆ ಮಾಡಿತ್ತು.
ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ವಿಶ್ವ, ಅಫ್ಗಾನಿಸ್ತಾನ, ಭಾರತ–ಕಾಶ್ಮೀರ, ಪಾಕಿಸ್ತಾನ ಮತ್ತು ಶಿಯಾ ವಿರೋಧಿ (ಅವುಗಳ ಗುರಿಯ ಆಧಾರದಲ್ಲಿ) ಆಧಾರದಲ್ಲಿ ವರದಿಯಲ್ಲಿ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಲಷ್ಕರ್–ಎ–ತಯ್ಬಾ 80ರ ದಶಕದ ಅಂತ್ಯದಲ್ಲಿ ಸೃಷ್ಟಿಯಾಗಿದ್ದು, ಇದನ್ನು 2001ರಲ್ಲಿ ಅಂತರರಾಷ್ಟ್ರೀಯ ಮಟ್ಟದ ನಿಷೇಧಿತ ಉಗ್ರ ಸಂಘಟನೆ ಎಂದು ಘೋಷಿಸಲಾಗಿತ್ತು.
2008ರ ಮುಂಬೈ ದಾಳಿ ಸೇರಿದಂತೆ ಭಾರತದಲ್ಲಿ ನಡೆದಿರುವ ಹಲವು ಪ್ರಮುಖ ದಾಳಿಗಳ ಹಿಂದೆ ಲಷ್ಕರ್ ಕೈವಾಡವಿರುವುದಾಗಿ ಸಿಆರ್‌ಎಸ್ ವರದಿ ಉಲ್ಲೇಖಿಸಿದೆ.
ಕಾಶ್ಮೀರಿ ಉಗ್ರ ಮಸೂದ್ ಅಜರ್ 2000ನೇ ಇಸವಿಯಲ್ಲಿ ಸ್ಥಾಪಿಸಿದ ಜೈಷ್–ಎ–ಮೊಹಮ್ಮದ್ ಅನ್ನು ಅಂತರರಾಷ್ಟ್ರೀಯ ನಿಷೇಧಿತ ಉಗ್ರ ಸಂಘಟನೆ ಎಂದು 2001ರಲ್ಲಿ ಘೋಷಿಸಲಾಗಿತ್ತು. 2001ರಲ್ಲಿ ಭಾರತದ ಸಂಸತ್ ಮೇಲೆ ನಡೆದ ದಾಳಿಯಲ್ಲಿ ಲಷ್ಕರ್ ಜತೆಗೆ ಜೈಷ್ ಕೈವಾಡವೂ ಇತ್ತು ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.