ADVERTISEMENT

ಪಾಕ್‌: ಬೆದರಿಕೆ ನಡುವೆಯೂ ರ್‍ಯಾಲಿ ನಡೆಸಿದ ಇಮ್ರಾನ್‌ ಖಾನ್‌

ದೇಶದ ಆರ್ಥಿಕ ಪುನಶ್ಚೇತನಕ್ಕೆ 10 ಅಂಶಗಳ ಭರವಸೆ

ಪಿಟಿಐ
Published 26 ಮಾರ್ಚ್ 2023, 16:19 IST
Last Updated 26 ಮಾರ್ಚ್ 2023, 16:19 IST
ಲಾಹೋರ್‌ನ ಮಿನಾರ್‌–ಇ–ಪಾಕಿಸ್ತಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ರ್‍ಯಾಲಿಯಲ್ಲಿ ಮರದ ಮೇಲೆ ನಿಂತು ಇಮ್ರಾನ್ ಅವರ ಭಾಷಣ ಆಲಿಸಿದ ಜನರು –ಎಪಿ/ಪಿಟಿಐ ಚಿತ್ರ
ಲಾಹೋರ್‌ನ ಮಿನಾರ್‌–ಇ–ಪಾಕಿಸ್ತಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ರ್‍ಯಾಲಿಯಲ್ಲಿ ಮರದ ಮೇಲೆ ನಿಂತು ಇಮ್ರಾನ್ ಅವರ ಭಾಷಣ ಆಲಿಸಿದ ಜನರು –ಎಪಿ/ಪಿಟಿಐ ಚಿತ್ರ   

ಲಾಹೋರ್‌ (ಪಿಟಿಐ): ಸಾಕಷ್ಟು ಬೆದರಿಕೆಗಳು ಮತ್ತು ಅಡೆ– ತಡೆಗಳ ನಡುವೆಯೂ ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ರಾತ್ರಿ ಮಿನಾರ್- ಇ- ಪಾಕಿಸ್ತಾನದಲ್ಲಿ ಬೃಹತ್‌ ರ್‍ಯಾಲಿಯನ್ನು ಯಶಸ್ವಿಯಾಗಿ ನಡೆಸಿದರು.

ಇಮ್ರಾನ್‌ ಖಾನ್ ಅವರ ರ್‍ಯಾಲಿಯನ್ನು ವಿಫಲಗೊಳಿಸಲು ಲಾಹೋರ್‌ನ ಮಿನಾರ್-ಇ-ಪಾಕಿಸ್ತಾನಕ್ಕೆ ಹೋಗುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ಪೊಲೀಸರು ನಿರ್ಬಂಧಿಸಿದರು. ರ್‍ಯಾಲಿ ನಡೆಯುವ ಸ್ಥಳದಲ್ಲಿ ಇಂಟರ್ನೆಟ್ ಸೇವೆಯನ್ನೂ ನಿರ್ಬಂಧಿಸಲಾಗಿತ್ತು. ಈ ಅಡೆತಡೆಗಳ ನಡುವೆಯೂ ಜನರು ಕಾಲ್ನಡಿಗೆ ಮೂಲಕ ರ್‍ಯಾಲಿ ನಡೆಯುವ ಸ್ಥಳವನ್ನು ತಲುಪಿದರು.

ಪಾಕಿಸ್ತಾನ ಸರ್ಕಾರವು ಈ ರ್‍ಯಾಲಿ ಕುರಿತು ವರದಿ ಮಾಡಬಾರದೆಂದು ದೇಶದ ಪ್ರಸಾರ ಮಾಧ್ಯಮಕ್ಕೆ ಒತ್ತಡ ಹೇರಿತ್ತು.

ADVERTISEMENT

ಜೀವ ಬೆದರಿಕೆ ಎದುರಿಸುತ್ತಿರುವ ಇಮ್ರಾನ್‌ ಖಾನ್‌, ಬುಲೆಟ್‌ಪ್ರೂಫ್‌ ಗಾಜು ಹೊಂದಿದ್ದ ಕಂಟೇನರ್‌ ಒಳಗಿನಿಂದ ಭಾಷಣ ಮಾಡಿದರು. ರ್‍ಯಾಲಿಯಲ್ಲಿ ಅಪಾರ ಪ್ರಮಾಣದ ಮಹಿಳೆಯರೂ ಭಾಗವಹಿಸಿದ್ದರು.

ಆರ್ಥಿಕ ಪುನಶ್ಚೇತನಕ್ಕೆ ಇಮ್ರಾನ್‌ ಭರವಸೆ:

ಬೃಹತ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್‌, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳುವ 10 ಮಾರ್ಗಸೂಚಿ ಅಂಶಗಳನ್ನು ಪ್ರಸ್ತುತಪಡಿಸಿದರು.

ವಿದೇಶಿ ನೇರ ಹೂಡಿಕೆಗಳನ್ನು ಆಕರ್ಷಿಸಲು ಸಾಗರೋತ್ತರ ಪಾಕಿಸ್ತಾನಿಗಳು ದೇಶದಲ್ಲೇ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುವುದು. ಆದಾಯ ತೆರಿಗೆ ಸಂಗ್ರಹದ ಕುರಿತಾಗಿ ಕಠಿಣ ನಿರ್ಧಾರ, ಉದ್ಯೋಗ ಸೃಷ್ಟಿ, ಚೀನಾದ ಸಹಕಾರದೊಂದಿಗೆ ಕೃಷಿ ಉತ್ಪನ್ನ ವೃದ್ಧಿಗೆ ಕ್ರಮ ತೆಗೆದುಕೊಳ್ಳುವುದೂ ಸೇರಿದಂತೆ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದರು.

ಅಲ್ಲದೆ ಅಕ್ರಮ ಹಣ ವರ್ಗಾವಣೆಯನ್ನು ಸ್ಥಗಿತಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.